ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ವರ್ತುಲ ರಸ್ತೆ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮಾಜಿ ಪ್ರಧಾನಿ, ರಾಜ್ಯಸಭೆ ಸದಸ್ಯರಾದ ಹೆಚ್.ಡಿ. ದೇವೇಗೌಡ ಅವರು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದರು.
ಸಂಸತ್ ಭವನದಲ್ಲಿ ಸಾರಿಗೆ ಸಚಿವರ ಕಚೇರಿಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಗಡ್ಕರಿ ಅವರನ್ನು ಭೇಟಿಯಾದ ಮಾಜಿ ಪ್ರಧಾನಿ ದೇವೇಗೌಡ ಅವರು, ಹಾಸನ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಕರಾವಳಿ ಮತ್ತು ಒಳನಾಡು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಹೀಗಾಗಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಅಗತ್ಯವಿದ್ದು, ವರ್ತುಲ ರಸ್ತೆ ನಿರ್ಮಾಣದ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು.
ಹಾಸನ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಸಾರಿಗೆ ಸಚಿವರಿಗೆ ಮನವಿ ಪತ್ರ ನೀಡಿದ ದೇವೇಗೌಡರು, ಈ ಯೋಜನೆಗೆ ಅದಷ್ಟು ಬೇಗ ಅನುಮೋದನೆ ನೀಡಬೇಕು. ಹಾಸನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ, ಸಂಪರ್ಕವನ್ನು ಸುಧಾರಿಸುವಲ್ಲಿ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವಲ್ಲಿ ಪ್ರಸ್ತಾವಿತ ರಿಂಗ್ ರಸ್ತೆಯ ನಿರ್ಣಾಯಕ ಪಾತ್ರವನ್ನು ನಿಯೋಗ ಒತ್ತಿ ಹೇಳಿದರು.
ಪ್ರಸ್ತಾವಿತ ಹೊರ ವರ್ತುಲ ರಸ್ತೆಯು ಬೆಂಗಳೂರು-ನೆಲಮಂಗಲ-ಮಂಗಳೂರು ರಸ್ತೆ (NH-75) ಅನ್ನು ಹಾಸನ ವಿಮಾನ ನಿಲ್ದಾಣ, ಹಾಸನ-ಅರಸೀಕೆರೆ ರಸ್ತೆ (SH-71), ಹಾಸನ-ಹಳೇಬೀಡು-ಹಾಸನ ರಸ್ತೆ ಮತ್ತು ಹಾಸನ-ಬೆಲೂರು ರಸ್ತೆ (NH-373) ಗೆ ಸಂಪರ್ಕಿಸುತ್ತದೆ. ಈ ಸಂಪರ್ಕವು ಸುಗಮ ಸಾರಿಗೆಗೆ ಅನುಕೂಲವಾಗುತ್ತದೆ. ಅಲ್ಲದೆ, ಹಾಸನ ಜಿಲ್ಲೆಯಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು ಮತ್ತು ರಾಷ್ಟ್ರೀಯ ಪ್ರವಾಸಿ ಸರ್ಕ್ಯೂಟ್ ನ ಭಾಗವಾಗಿರುವ ಹಾಸನ, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಶ್ರವಣಬೆಳಗೊಳ, ಮೈಸೂರು, ಮಡಿಕೇರಿ ಮತ್ತು ಮಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ದೇವೇಗೌಡರು ವಿವರಿಸಿದರು.
ವರ್ತುಲ ರಸ್ತೆಯ ಒಟ್ಟು ಉದ್ದ 21.950 ಕಿ.ಮೀ. ದೂರವನ್ನು ಹೊಂದಿದ್ದು, ಯೋಜನೆಗೆ ಸುಮಾರು 120 ಹೆಕ್ಟೇರ್ ಭೂಮಿ ಅಗತ್ಯವಿದೆ. ಜಿಎಸ್ಟಿ, ಭೂಸ್ವಾಧೀನ ಮತ್ತು ಸ್ಥಳಾಂತರ ಸೇರಿದಂತೆ ಯೋಜನೆಯ ಅಂದಾಜು ವೆಚ್ಚ ಸುಮಾರು ₹750 ಕೋಟಿ ಆಗಲಿದೆ. ಉತ್ತಮ ರಸ್ತೆ ಮೂಲಸೌಕರ್ಯವು ಈ ಪ್ರದೇಶದಲ್ಲಿ ವೇಗಯುತ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಈ ವರ್ತುಲ ರಸ್ತೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ವ್ಯಾಪಾರ, ಕೃಷಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಹಾಸನದ ಜನರಿಗೆ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ದೇವೇಗೌಡರು ಮನವರಿಕೆ ಮಾಡಿಕೊಟ್ಟರು.
ನಿಯೋಗದಲ್ಲಿ ಮಾಜಿ ಸಚಿವ ಸಂಸದ ಹೆಚ್.ಡಿ. ರೇವಣ್ಣ, ಕೋಲಾರದ ಲೋಕಸಭೆ ಕ್ಷೇತ್ರದ ಸದಸ್ಯ ಎಂ. ಮಲ್ಲೇಶ್ ಬಾಬು, ಮಾಜಿ ಸಚಿವ ಎ.ಮಂಜು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ ಅವವರಿದ್ದರು.