ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಂಸ್ಥೆ (USCIRF) ವರದಿಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಟುಶಬ್ಧಗಳಲ್ಲಿ ತಿರಸ್ಕರಿಸಿದೆ.
ಅಮೆರಿಕದ CIRF ವರದಿಯನ್ನು ಪಕ್ಷಪಾತಿ ಮತ್ತು ರಾಜಕೀಯ ಪ್ರೇರಿತ ಎಂದು ಟೀಕಿಸಿದ ಭಾರತ, ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ಸಂಕೇತವಾಗಿರುವ ಭಾರತದ ಖ್ಯಾತಿಯನ್ನು “ಕುಗ್ಗಿಸುವ” ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದೆ. ಅಲ್ಲದೆ ಯುಎಸ್ಸಿಐಆರ್ಎಫ್ ಅನ್ನು ಕಳವಳಕಾರಿ ಘಟಕ ಎಂದು ಘೋಷಿಸಬೇಕು ಎಂದು ಭಾರತ ಪ್ರತಿಪಾದಿಸಿದೆ.
ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಂಸ್ಥೆ (USCIRF)ಯು, ಭಾರತದಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿ ಕುರಿತು ವರದಿ ಪ್ರಕಟಿಸಿದ್ದು, ಇದರಲ್ಲಿ, ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ. ಎಂದು ಆರೋಪಿಸಿದೆ. ಭಾರತವನ್ನು “ನಿರ್ದಿಷ್ಟ ಕಾಳಜಿಯ ದೇಶ” ಎಂದು ಪರಿಗಣಿಸಲು ಶಿಫಾರಸು ಮಾಡಿರುವ ಈ ವರದಿ, ಭಾರತದ ಬಾಹ್ಯ ಗುಪ್ತಚರ ಸಂಸ್ಥೆ R&AW ಮೇಲೆ ನಿರ್ಬಂಧ ಹೇರುವಂತೆಯೂ ಶಿಫಾರಸು ಮಾಡಿದೆ.
ಈ ವರದಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, ಅಮೆರಿಕದ ಧಾರ್ಮಿಕ ಸಂಸ್ಥೆಯ ವರದಿಗಳು ಪಕ್ಷಪಾತ ಮತ್ತು ರಾಜಕೀಯ ಪ್ರೇರಿತವಾಗಿರುತ್ತವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವಾರ್ಷಿಕ ವರದಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು,USCIRF ತಪ್ಪು ಮಾಹಿತಿಯನ್ನು ಹರಡುತ್ತಿದೆ. ಈ ಸಂಸ್ಥೆ ನಿಖರವಲ್ಲದ ಘಟನೆಗಳನ್ನು ತಪ್ಪಾಗಿ ಅರ್ಥೈಸುತ್ತದೆ. ಭಾರತವು ಬಹುಸಾಂಸ್ಕೃತಿಕ ಸಮಾಜವನ್ನು ಹೊಂದಿದ್ದು, ಧರ್ಮನಿರಪೇಕ್ಷತೆ ಬಗ್ಗೆ ನಮಗೆ ಯಾರೂ ಪಾಠ ಮಾಡುವ ಅವಶ್ಯಕತೆ ಇಲ್ಲ. ಎಂದು ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತೀವ್ರ ಆಕ್ರೋಶ ಹೊರಹಾಕಲಾಗಿದೆ.
ಭಾರತದ ಬಹುಸಾಂಸ್ಕೃತಿಕ ಸಮಾಜದ ಬಗ್ಗೆ ಇಡೀ ಜಗತ್ತೇ ಗೌರವ ಭಾವನೆಯನ್ನು ಹೊಂದಿದೆ. ಆದರೆ USCIRF ಭಾರತದ ಬಗ್ಗೆ ತಪ್ಪು ಕಲ್ಪನೆಗಳನ್ನು ಬಿತ್ತುವುದರಲ್ಲಿ ನಿರತವಾಗಿದ್ದು, ಸಂಸ್ಥೆಯು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿಲ್ಲ ಎಂದು ಭಾರತ ಆಕ್ಷೇಪಿಸಿದೆ.
ಭಾರತವು ಎಲ್ಲಾ ಧರ್ಮಗಳಿಗೆ ಸೇರಿದ 1.4 ಶತಕೋಟಿ ಜನರಿಗೆ ನೆಲೆಯಾಗಿದೆ. ಆದಾಗ್ಯೂ, USCIRF ಭಾರತದ ಬಹುತ್ವ ಚೌಕಟ್ಟಿನ ವಾಸ್ತವದೊಂದಿಗೆ ತೊಡಗಿಸಿಕೊಳ್ಳುತ್ತದೆ ಅಥವಾ ಅದರ ವೈವಿಧ್ಯಮಯ ಸಮುದಾಯಗಳ ಸಾಮರಸ್ಯದ ಸಹಬಾಳ್ವೆಯನ್ನು ಅಂಗೀಕರಿಸುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ. ಭಾರತದ ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ಸ್ಥಾನವನ್ನು ದುರ್ಬಲಗೊಳಿಸುವ USCIRF ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ವಾಸ್ತವವಾಗಿ ಧಾರ್ಮಿಕ ಸಹಿಷ್ಣುತೆ ಬಗ್ಗೆ ಭಾರತಕ್ಕೆ ಪಾಠ ಮಾಡುವ ಈ ಸಂಸ್ಥೆಯ ಪ್ರಯತ್ನಗಳೇ ಹಾಸ್ಯಾಸ್ಪದವಾಗಿದೆ ಎಂದು ವಿದೇಶಾಂಗ ಸಚಿವಾಲಯ ವ್ಯಂಗ್ಯವಾಡಿದೆ.
ಏನಿದು USCIRF?
USCIRF ಅಂದರೆ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ. ಇದು ಅಮೆರಿಕದ ಒಂದು ಅಂಗ ಸಂಸ್ಥೆಯಾಗಿದ್ದು, ಇದು ಬೇರೆ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕ ಸರ್ಕಾರಕ್ಕೆ ವರದಿ ನೀಡುತ್ತದೆ. ಸದ್ಯ USCIRF ಭಾರತದ ಅಲ್ಪಸಂಖ್ಯಾತರ ಸ್ಥಿತಿಗತಿ ಕುರಿತು ಮತ್ತು R&AW ಮೇಲೆ ನಿರ್ಬಂಧ ಹೇರುವ ಕುರಿತು ನೀಡಿರುವ ವರದಿಯನ್ನು, ಡೊನಾಲ್ಡ್ ಟ್ರಂಪ್ ಆಡಳಿತ ತಿರಸ್ಕರಿಸುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.