ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿನ ದರ, ಮುಂದೆ ನೀರಿನ ದರ, ಆಮೇಲೆ ವಿದ್ಯುತ್ ದರ, ಬಹುಶಃ ಸೇವಿಸುವ ಗಾಳಿಗೂ ಬೆಲೆ ನಿಗದಿ ಪಡಿಸುವ ದಿನ ಬಹಳ ದೂರ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಶಾಸಕ ಮಾಜಿ ಸಚಿವ ಸುರೇಶ್ ಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ದರ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹಧನ ನೀಡ ಬೇಕೆಂಬುದು ಸರಿ. ಆದರೆ ಗ್ರಾಹಕರ ಜೇಬಿನಿಂದ ಕಿತ್ತು ಕೊಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ, ಆಗಸ್ಟ್ 2023 ರಲ್ಲಿ, ಹಾಲಿನ ಬೆಲೆ ಲೀಟರ್‌ಗೆ 3 ರೂ.ಗಳಷ್ಟು ಏರಿಕೆಯಾಯಿತು. ಅದಾದ ಬಳಿಕ 2024ರ ಜೂನ್ 26ಕ್ಕೆ ನಂದಿನಿಯ ಎಲ್ಲಾ ಹಾಲಿನ ಬೆಲೆಯನ್ನು 2 ರೂಪಾಯಿ ಏರಿಕೆ ಮಾಡಿತು. ಈಗ ಮತ್ತೊಂದು ಸುತ್ತಿನ ಹಾಲಿನ ಬೆಲೆ ಏರಿಕೆಯಾಗಿದೆ. ಏಪ್ರಿಲ್ 1 ರಿಂದ ಹಾಲಿನ ದರ ಲೀಟರ್ 4 ರೂಪಾಯಿ ಏರಿಕೆ ಘೋಷಣೆ ಮಾಡಿದೆ. ಇದರೊಂದಿಗೆ ಶ್ರೀ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೀಟರ್ ಹಾಲಿನ ಬೆಲೆಯಲ್ಲಿ 9 ರೂಪಾಯಿ ಏರಿಕೆ ಮಾಡಿದಂತಾಗಿದೆ” ಎಂದು ತಮ್ಮ ಪೋಸ್ಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.