ಮಂಗಳೂರು ವಿವಿ ಘಟಿಕೋತ್ಸವ: ಡಾ.ಎಂಎನ್‌ಆರ್, ಕನ್ಯಾನ ಸದಾಶಿವ ಶೆಟ್ಟಿ, ರೋಹನ್ ಮೊಂತೆರೋಗೆ ಗೌರವ ಡಾಕ್ಟರೇಟ್

ಹೊಸದಿಗಂತ ವರದಿ, ಮಂಗಳೂರು:

ಮಂಗಳೂರು ವಿಶ್ವವಿದ್ಯಾನಿಲಯದ 43ನೇ ವಾರ್ಷಿಕ ಘಟಿಕೋತ್ಸವ ನಾಳೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯಲಿದ್ದು, ಈ ಸಂದರ್ಭ ಉದ್ಯಮಿಗಳಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ರೋಹನ್ ಮೊಂತೆರೋ, ಕನ್ಯಾನ ಸದಾಶಿವ ಶೆಟ್ಟಿ ಇವರುಗಳು ಮಂಗಳೂರು ವಿವಿ ಗೌರವ ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಘಟಿಕೋತ್ಸವದ ವಿವರ ನೀಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಸಮಾಜ ಸೇವಾ ಕ್ಷೇತ್ರದ ಸಾಧನೆಗಾಗಿ ಈ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ ಎಂದರು.

ಘಟಿಕೋತ್ಸವದಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ಉಪಾಧ್ಯಕ್ಷ ಮತ್ತು ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ.ಎನ್. ರಾಜಶೇಖರನ್ ಪಿಳ್ಳೈ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿರುವರು. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿರುವರು. ಉನ್ನತ ಶಿಕ್ಷಣ ಸಚಿವ ಹಾಗೂ ಸಹಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿರುವರು ಎಂದು ಅವರು ಹೇಳಿದರು.

ಈ ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 64 (ಕಲಾ ನಿಕಾಯ-12, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-38, ವಾಣಿಜ್ಯ ನಿಕಾಯ – 11, ಶಿಕ್ಷಣ ನಿಕಾಯ – 03) ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ (ಪಿಎಚ್‌ಡಿ) ಪಡೆಯಲಿದ್ದಾರೆ. ಇವರಲ್ಲಿ 31 (48.43%) ಪುರುಷರು ಮತ್ತು 33 (51.56%) ಮಹಿಳೆಯರು ಹಾಗೂ 03 (ಪುರುಷ-02, ಮಹಿಳೆ-01) ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿರುವರು ಎಂದು ಪ್ರೊ.ಪಿ.ಎಲ್.ಧರ್ಮ ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!