ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಸೂಪರ್ ಹೀರೋ ಸಿನಿಮಾ ಎಂದಾಗ ಮೊದಲಿಗೆ ನೆನಪಾಗೋದು ‘ಕ್ರಿಶ್’. ಅದಕ್ಕೆ ಮುಂಚೆ ಕೆಲವು ಸಿನಿಮಾಗಳು ಬಂದಿದ್ದವಾದರೂ ಆಧುನಿಕ ವಿಎಫ್ಎಕ್ಸ್ ಬಳಸಿಕೊಂಡು ಮಾಡಿರೋ ಸಿನಿಮಾ ಇದು. ‘ಕೋಯಿ ಮಿಲ್ ಗಯಾ’ ಸಿನಿಮಾದ ಕತೆಯನ್ನೇ ಮುಂದುವರೆಸಿ ‘ಕ್ರಿಶ್’ ಕತೆ ಹೆಣೆಯಲಾಗಿತ್ತು. ‘ಕ್ರಿಶ್ 3’ ಸಿನಿಮಾ, 2013 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ‘ಕ್ರಿಶ್ 4’ ಸಿನಿಮಾದ ಬಗ್ಗೆ ಮಹತ್ವದ ಅಪ್ಡೇಟ್ಸ್ ಹೊರಬಿದ್ದಿದೆ.
12 ವರ್ಷಗಳ ಬಳಿಕ ‘ಕ್ರಿಶ್ 4’ ಸಿನಿಮಾ ನಿರ್ಮಿಸುವ ಬಗ್ಗೆ ಆಸಕ್ತಿಯನ್ನು ರಾಕೇಶ್ ರೋಷನ್ ವ್ಯಕ್ತಪಡಿಸಿದ್ದು, ಸಂದರ್ಶನವೊಂದರಲ್ಲಿ ಸ್ವತಃ ರಾಕೇಶ್ ರೋಷನ್ ಹೇಳಿಕೊಂಡಿರುವಂತೆ, ಸಿನಿಮಾದ ಕತೆ ಬಹುತೇಕ ರೆಡಿಯಿದೆ. ಆದರೆ ನಿರ್ದೇಶಕರು ಅಂತಿಮವಾಗುವುದು ತುಸು ತಡವಾಗಿತ್ತು. ಇದೀಗ ಸಿನಿಮಾಕ್ಕೆ ನಿರ್ದೇಶಕರು ಸಿಕ್ಕಿದ್ದಾರೆ ಅವರೇ ಹೃತಿಕ್ ರೋಷನ್ ಎಂದು ಹೇಳಿದ್ದಾರೆ.
ನಟ ಹೃತಿಕ್ ರೋಷನ್, ಇದೇ ಮೊದಲ ಬಾರಿಗೆ ನಿರ್ದೇಶಕ ಆಗುತ್ತಿದ್ದಾರೆ. ‘ಕ್ರಿಶ್’ ಪಾತ್ರದಲ್ಲಿ ನಟಿಸುವುದರ ಜೊತೆಗೆ ‘ಕ್ರಿಶ್ 4’ ಸಿನಿಮಾದ ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ ಎಂದು ಹೃತಿಕ್ ತಂದೆ ಹೇಳಿದ್ದಾರೆ.