ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಉಪಪ್ರಧಾನಿ, ಬಿಜೆಪಿ ನಾಯಕ ಭಾರತ ರತ್ನ ಎಲ್.ಕೆ.ಅಡ್ವಾಣಿ ಅವರ ಮನೆಗೆ ಇತ್ತೀಚೆಗೆ ಬಹುಭಾಷಾ ಗಾಯಕ ಸೋನು ನಿಗಮ್ ಭೇಟಿ ನೀಡಿದ್ದಾರೆ.
ಸೋನು ನಿಗಮ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಅಡ್ವಾಣಿ ಅವರನ್ನು ಭೇಟಿಯಾದ ಫೋಟೊ ಮತ್ತು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎಲ್.ಕೆ.ಅಡ್ವಾಣಿ ಮತ್ತು ಪ್ರತಿಭಾ ಅಡ್ವಾಣಿ ಅವರೊಂದಿಗೆ ತುಂಬಾ ವರ್ಷಗಳ ಬಾಂಧವ್ಯ ಹೊಂದಿದ್ದೇನೆ. ಹೀಗಾಗಿ ಅವರನ್ನು ಭೇಟಿಯಾಗುವುದು ಎಂದಿಗೂ ಖುಷಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ʼಹಲವು ವರ್ಷಗಳಿಂದ ಎಲ್.ಕೆ.ಅಡ್ವಾಣಿ ಮತ್ತು ಪ್ರತಿಭಾ ಅಡ್ವಾಣಿ ನನ್ನ ಜೀವನದ ಭಾಗವೇ ಆಗಿದ್ದಾರೆ. ಹೀಗಾಗಿ ಡಿಟಿಯು ಕಾನ್ಸೆರ್ಟ್ ಮುಗಿಸಿ ಅವರೊಂದಿಗೆ ಒಂದಷ್ಟು ಸಮಯ ಕಳೆದೆ. ನನ್ನ ತಾಯಿ ಸಿಂಧಿಗಳ ನಡುವೆ ಬೆಳೆದಾಗಿನಿಂದ ಸಿಂಧಿ ಆಹಾರವು ನಮ್ಮ ಬಾಲ್ಯದ ಪ್ರಮುಖ ಭಾಗವಾಗಿದೆ. ಪ್ರತಿಭಾ ಅವರಿಗೆ ಅದು ತಿಳಿದಿದೆ ಮತ್ತು ಅದಕ್ಕಾಗಿಯೇ ಅವರು ದಾಲ್ ಪಕ್ವಾನ್ ಜತೆಗೆ ನನಗಾಗಿ ಸಿಂಧಿ ಕಡಿಯನ್ನು ತಯಾರಿಸಿದ್ದರು. 97 ವರ್ಷದ ಅಡ್ವಾಣಿ ಅವರು ಈಗಲೂ ಆರೋಗ್ಯವಂತರಾಗಿದ್ದಾರೆ. ಅವರು ನಮ್ಮ ಕುಟುಂಬದ ಭಾಗ ಎಂದು ಬರೆದುಕೊಂಡಿದ್ದಾರೆ.
ವಿಡಿಯೊದಲ್ಲಿ ಅಡ್ವಾಣಿ ಅವರು ಸೋನು ನಿಗಮ್ ಅವರೊಂದಿಗೆ ಖುಷಿಯಿಂದ ನಗು ನಗುತ್ತಾ ಸಮಯ ಕಳೆದಿರುವುದು ಕಂಡು ಬಂದಿದೆ. ಜತೆಗೆ ಅಡ್ವಾಣಿ ಅವರು ಸೋನು ನಿಗಮ್ ಧ್ವನಿ ನೀಡಿರುವ ʼಅಗ್ನಿಪತ್ʼ ಚಿತ್ರದ ಅಭಿ ಮುಜೆ ಮೇ ಕಹೀನ್ ಹಾಡಿನ ತುಣುಕನ್ನು ವೀಕ್ಷಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.