ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋಹನ್ಲಾಲ್ ಅಭಿನಯದ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿರುವ ‘ಎಲ್ 2: ಎಂಪುರಾನ್’ ಸಿನಿಮಾ ನಿನ್ನೆಯಷ್ಟೆ ದೇಶದಾದ್ಯಂತ ಬಿಡುಗಡೆ ಆಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಆದರೆ ಈಗ ‘ಎಂಪುರಾನ್’ ಸಿನಿಮಾಕ್ಕೆ ರಾಜಕೀಯದ ಬಿಸಿ ತಾಗಲು ಆರಂಭವಾಗಿದ್ದು, ಬಿಜೆಪಿ ಪಕ್ಷದ ಕೆಲ ಮುಖಂಡರು ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಎಲ್2: ಎಂಪುರಾನ್’ ಸಿನಿಮಾದಲ್ಲಿ ಹಿಂದೂ ತೀವ್ರಗಾಮಿಯೊಬ್ಬ ಗರ್ಭಿಣಿ ಮುಸ್ಲಿಂ ಮಹಿಳೆಯ ಮೇಲೆ ದಾಳಿ ಮಾಡುವ ದೃಶ್ಯಗಳಿದ್ದು ಇದು ಗೋಧ್ರಾ ಹತ್ಯಾಕಾಂಡವನ್ನು ನೆನಪಿಸುವಂತಿದೆ ಎನ್ನಲಾಗಿದೆ. ಮಾತ್ರವಲ್ಲದೆ ತೀವ್ರತರವಾದ ಹಿಂದುತ್ವವವನ್ನು ವಿರೋಧಿಸುವ ಸಂಭಾಷಣೆ, ದೃಶ್ಯಗಳು ಈ ಸಿನಿಮಾದಲ್ಲಿದ್ದು, ಇವಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.