ಹೊಸದಿಗಂತ ಡಿಜಿಟಲ್ ಡೆಸ್ಕ್:
2023-24ರ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆಯಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುಮಾರು 2.16 ಕೋಟಿ ಪ್ರಯಾಣಿಕರು ಟಿಕೆಟ್ ರಹಿತವಾಗಿ ರೈಲ್ವೆಯಲ್ಲಿ ಪ್ರಯಾಣ ಮಾಡಿದ್ದಾರೆ. ಇದರ ಪರಿಣಾಮವಾಗಿ ಈ ಪ್ರಯಾಣಿಕರಿಂದ ಸುಮಾರು 562.40 ಕೋಟಿ ರೂ. ಹೆಚ್ಚುವರಿ ಶುಲ್ಕ ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.
ಟಿಕೆಟ್ ಇಲ್ಲದೇ ಪ್ರಯಾಣಿಸುವ ಸಮಸ್ಯೆಯನ್ನು ನಿಭಾಯಿಸಲು, ಭಾರತೀಯ ರೈಲ್ವೆ ವರ್ಷವಿಡೀ ವ್ಯಾಪಕವಾದ ಟಿಕೆಟ್ ಪರಿಶೀಲನಾ ಅಭಿಯಾನಗಳನ್ನು ನಡೆಸಿತು. ಸ್ಥಳೀಯ ಪರಿಸ್ಥಿತಿಗಳು ಮತ್ತು ರೈಲ್ವೆ ಸಚಿವಾಲಯದ ನಿರ್ದೇಶನಗಳ ಆಧಾರದ ಮೇಲೆ ವಿವಿಧ ವಲಯ ರೈಲ್ವೆಗಳು ಈ ಅಭಿಯಾನಗಳನ್ನು ಆಯೋಜಿಸಿದ್ದವು. ಟಿಕೆಟ್ ಪರಿಶೀಲನೆಯು ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆದಾಯವನ್ನು ಗಳಿಸಲು ನಿರಂತರವಾಗಿ ನಡೆಯುವ ಪ್ರಕ್ರಿಯೆ ಆಗಿದೆ ಎಂದು ಸಚಿವ ವೈಷ್ಣವ್ ತಿಳಿಸಿದ್ದಾರೆ.