ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಯೂಟ್ಯೂಬ್ ಶೋ ವೇಳೆ ಪೋಷಕರ ಲೈಂಗಿಕತೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಸ್ತರಿಸಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ನೇತೃತ್ವದ ಪೀಠ, ಅಲ್ಲಾಹಬಾಡಿಯಾ ಅವರಿಗೆ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದೆ. ಆದರೆ, ಅವರು ವಿದೇಶ ಪ್ರವಾಸ ಮಾಡಲು ಸಲ್ಲಿಸಿದ ಅರ್ಜಿಯನ್ನು ತಕ್ಷಣವೇ ಅಂಗೀಕರಿಸಲು ನಿರಾಕರಿಸಿದೆ.
ವಿವಾದಾತ್ಮಕ ಹೇಳಿಕೆ ಕುರಿತು ತನಿಖೆ ಪೂರ್ಣಗೊಂಡ ನಂತರ ಆರೋಪಿ ವಿದೇಶ ಪ್ರವಾಸ ಮಾಡಲು ಪಾಸ್ಪೋರ್ಟ್ ಬಿಡುಗಡೆ ಕುರಿತ ಅರ್ಜಿಯನ್ನು ನಾವು ಪರಿಗಣಿಸುತ್ತೇವೆ ಎಂದು ಪೀಠ ಹೇಳಿದೆ.
ರಣವೀರ್ ಅಲ್ಲಾಬಾಡಿಯಾ ವಿರುದ್ಧ ಮುಂಬೈ, ಜೈಪುರ ಮತ್ತು ಗುವಾಹಟಿಯಲ್ಲಿ ಹಲವಾರು ಎಫ್ಐಆರ್ಗಳು ದಾಖಲಾಗಿವೆ.
ಫೆಬ್ರವರಿ 18 ರಂದು, ಅಲ್ಲಾಬಾಡಿಯಾ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಆದರೆ ನ್ಯಾಯಾಲಯವು ಅಲ್ಲಾಬಾಡಿಯಾ ಅಸಭ್ಯ ಹೇಳಿಕೆಯನ್ನು ಖಂಡಿಸಿತ್ತು.