ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭಾ ಸಂಸದೆ ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಡಾ. ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ (64) ಶುಕ್ರವಾರ ನಿಧನರಾದರು. ಕ್ಕೋಡಿ ಪೆರುಮಾಳ್‌ಪುರಂನಲ್ಲಿರುವ ಅವರ ನಿವಾಸದಲ್ಲಿ ಅಚಾನಕ್ ಅಸ್ವಸ್ಥರಾಗಿ, ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ.
ಘಟನೆಯ ಸಮಯದಲ್ಲಿ ಡಾ. ಪಿ.ಟಿ. ಉಷಾ ದೆಹಲಿಯಲ್ಲಿ ಸಂಸತ್ತಿನ ಅಧಿವೇಶನದಲ್ಲಿದ್ದರು. ಪತಿಯ ನಿಧನದ ಸುದ್ದಿ ತಿಳಿದ ಕೂಡಲೇ ಅವರು ದೆಹಲಿಯಿಂದ ಕೇರಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ವಿ. ಶ್ರೀನಿವಾಸನ್ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಯಲ್ಲಿ ಡೆಪ್ಯೂಟಿ ಎಸ್‌ಪಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 1991ರಲ್ಲಿ ತಮ್ಮ ದೂರದ ಸಂಬಂಧಿ ಡಾ. ಪಿ.ಟಿ. ಉಷಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಒಬ್ಬ ಪುತ್ರನಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಡಾ. ಪಿ.ಟಿ. ಉಷಾ ಅವರಿಗೆ ಸಂತಾಪ ಸೂಚಿಸಿದ್ದು, ಕುಟುಂಬದ ದುಃಖಕ್ಕೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.



