ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್‌ಡಿಎಲ್) 2024-25ನೇ ಸಾಲಿನಲ್ಲಿ 1,787 ಕೋಟಿ ರೂಪಾಯಿ ದಾಖಲೆ ವಹಿವಾಟು ನಡೆಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈ ಆರ್ಥಿಕ ಸಾಲಿನಲ್ಲಿ ಒಟ್ಟು 416 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಅಂದರೆ ಕಳೆದ ಆರ್ಥಿಕ ವರ್ಷಕ್ಕಿಂತ 54 ಕೋಟಿ ರೂ. ಹೆಚ್ಚಿನ ನಿವ್ವಳ ಲಾಭ ಗಳಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಸಂಸ್ಥೆಯು 43,144 ಮೆಟ್ರಿಕ್ ಟನ್ ಸಾಬೂನು ಮತ್ತು ಮಾರ್ಜಕಗಳನ್ನು ಮಾರಾಟ ಮಾಡಿ, ದಾಖಲೆಯ ಲಾಭ ಗಳಿಸಿದೆ. ಲಾಭದಲ್ಲಿ ನಿಯಮಾನುಸಾರ ಶೇ.30ರಷ್ಟನ್ನು, ಅಂದರೆ 123 ಕೋಟಿ ರೂ.ಗಳನ್ನು ಸರಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.
2024-25ರಲ್ಲಿ ಸಂಸ್ಥೆಯು ಉತ್ಪಾದನೆ, ಮಾರಾಟ ಮತ್ತು ಲಾಭ ಮೂರರಲ್ಲೂ ಸಾರ್ವಕಾಲಿಕ ದಾಖಲೆ ಬರೆದಿದೆ. ಕಳೆದ ಸಾಲಿನಲ್ಲಿ ರಫ್ತು ವಹಿವಾಟಿನ ಮೂಲಕವೂ ಕೆಎಸ್‌ಡಿಎಲ್ 23.2 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸಿದೆ. ಸಂಸ್ಥೆಯು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ 19 ಉತ್ಪನ್ನಗಳನ್ನು ಒಳಗೊಂಡಿದೆ ಎಂದರು.