ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ಹವಾಮಾನಗಳಲ್ಲಿ ಭಾರೀ ಬದಲಾವಣೆಗಳು ಆಗುತ್ತಿದ್ದು, ಕೆಲವಡೆ ಮಳೆಯಾಗುತ್ತಿದ್ದರೆ ಮತ್ತೊಂದೆಡೆ ಬಿಸಿಲ ಶಾಖ ಸುಡುತ್ತಿದೆ.
ಇತ್ತ ಈ ಕುರಿತು ಭಾರತೀಯ ಹವಾಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿದ್ದು, ಚಂಡಮಾರುತದ ಪರಿಚಲನೆಯು ಅನೇಕ ರಾಜ್ಯಗಳಲ್ಲಿ ಅತ್ಯಂತ ಹೆಚ್ಚಿನ ತಾಪಮಾನದ ಜೊತೆಗೆ ಮಳೆ ಸಹ ಬರಬಹುದು ಎಂದು ಹೇಳಿದೆ.
ಐಎಂಡಿ ಮುನ್ಸೂಚನೆಯ ಪ್ರಕಾರ, ಏಪ್ರಿಲ್ ನಿಂದ ಜೂನ್ ವರೆಗೆ ಭಾರತದಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಮಧ್ಯ, ಪೂರ್ವ ಭಾರತ ಮತ್ತು ವಾಯುವ್ಯ ಬಯಲು ಪ್ರದೇಶಗಳಲ್ಲಿ ಹೆಚ್ಚಿನ ಸಮಯ ಶಾಖದ ಅಲೆಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ದೆಹಲಿಯಲ್ಲಿ ತಾಪಮಾನ ಹೆಚ್ಚಾದಂತೆ, ಏಪ್ರಿಲ್ 3 ರಿಂದ 5 ರವರೆಗೆ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ ಈಗಾಗಲೇ 34.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ತಾಪಮಾನ ಮತ್ತು ಶಾಖದ ಅಲೆಗಳು ಬೀಸುವ ಸಾಧ್ಯತೆಯಿದೆ. ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಾದ ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಚಾಮರಾಜನಗರದಲ್ಲಿ ಸಾಧಾರಣ ಮಳೆಯಾಗಲಿದೆ. ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ.