ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ (ತಿದ್ದುಪಡಿ) ಮಸೂದೆ ಕುರಿತು ಬಿಜು ಜನತಾದಳ (BJD) ತನ್ನ ನಿಲುವು ಬದಲಾವಣೆಯನ್ನು ಮಾಡಿದ್ದು, ಲೋಕಸಭೆಯಲ್ಲಿ ಮಸೂದೆಯನ್ನು ಪರಿಚಯಿಸುವ ಮೊದಲು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪಕ್ಷವು ರಾಜ್ಯಸಭೆಯಲ್ಲಿ ತನ್ನ ಸಂಸದರಿಗೆ ವಿಪ್ ನೀಡದಿರಲು ನಿರ್ಧರಿಸಿದೆ.
ತಮ್ಮ ಸಂಸದರಿಗೆ ಆತ್ಮಸಾಕ್ಷಿಯ ಆಧಾರದ ಮೇಲೆ ಮತ ಚಲಾಯಿಸಲು ಅವಕಾಶ ನೀಡಿದೆ.
ಹಿರಿಯ ಬಿಜೆಡಿ ನಾಯಕ ಮತ್ತು ರಾಜ್ಯಸಭಾ ಸಂಸದ ಸಸ್ಮಿತ್ ಪಾತ್ರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಈ ನಿರ್ಧಾರವನ್ನು ಘೋಷಿಸಿದರು. ಪಕ್ಷವು ಅಲ್ಪಸಂಖ್ಯಾತ ಸಮುದಾಯಗಳ ಭಾವನೆಗಳನ್ನು ಆಳವಾಗಿ ಗೌರವಿಸುತ್ತದೆ. ಅವರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಹೇಳಿದರು.
ಬಿಜು ಜನತಾದಳವು ವಕ್ಫ್ (ತಿದ್ದುಪಡಿ) ಮಸೂದೆ, 2025ರ ಬಗ್ಗೆ ಅಲ್ಪಸಂಖ್ಯಾತ ಸಮುದಾಯಗಳ ವಿವಿಧ ವರ್ಗಗಳು ವ್ಯಕ್ತಪಡಿಸಿದ ವೈವಿಧ್ಯಮಯ ಭಾವನೆಗಳನ್ನು ನಾವು ಆಳವಾಗಿ ಗೌರವಿಸುತ್ತೇವೆ ಎಂದು ಬರೆದಿದ್ದಾರೆ. ನಮ್ಮ ಪಕ್ಷವು, ಈ ಅಭಿಪ್ರಾಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ, ರಾಜ್ಯಸಭೆಯಲ್ಲಿ ನಮ್ಮ ಗೌರವಾನ್ವಿತ ಸದಸ್ಯರಿಗೆ ಮಸೂದೆಯು ಮತದಾನಕ್ಕೆ ಬಂದರೆ, ನ್ಯಾಯ, ಸಾಮರಸ್ಯ ಮತ್ತು ಎಲ್ಲಾ ಸಮುದಾಯಗಳ ಹಕ್ಕುಗಳ ಹಿತದೃಷ್ಟಿಯಿಂದ ತಮ್ಮ ಆತ್ಮಸಾಕ್ಷಿಯಿಂದ ಮತ ಚಲಾಯಿಸುವ ಜವಾಬ್ದಾರಿಯನ್ನು ವಹಿಸಿದೆ ಎಂದರು.