ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಅಂಗಾಂಗ ದಾನಕ್ಕೆ ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೋವಿನ ಸಮಯದಲ್ಲಿಯೂ ಇತರರ ಬಗ್ಗೆ ಆಲೋಚಿಸುವ ಜನರು ತಮ್ಮ ಪ್ರೀತಿಪಾತ್ರರ ದೇಹದ ಅಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆಯುತ್ತಿದ್ದಾರೆ.
ಇದೇ ಸಾಲಿಗೆ ರಾಮನಗರದ ಗ್ರಾಮೀಣ ಪ್ರದೇಶದ ಕುಟುಂಬವೊಂದು ಸೇರಿದೆ. ಅಂಗಾಂಗ ದಾನದ ಮೂಲಕ ಎಷ್ಟೋ ಮಂದಿಯ ಜೀವನಕ್ಕೆ ಬೆಳಕಾಗಿದೆ..
ಏನಿದು ಪ್ರಕರಣ?
ರಾಮನಗರದ ಕೃಷ್ಣ ಸಿ. ಹಾಗೂ ಪ್ರಿಯಾಂಕಾ ದಂಪತಿ ಅನ್ಯೂನ್ಯವಾಗಿ ಬಾಳ್ವೆ ನಡೆಸುತ್ತಿದ್ದರು. ಎಲ್ಲವೂ ಅದ್ಭುತವಾಗಿಯೇ ಇದೆ ಎನ್ನುವಾಗ ಸಿಡಿಲು ಬಡಿದಂಥ ಸುದ್ದಿಯೊಂದು ಪ್ರಿಯಾಂಕಾಗೆ ಸಿಕ್ಕಿತ್ತು. ಆರೋಗ್ಯವಾಗಿದ್ದ ಕೃಷ್ಣ ಅವರಿಗೆ ಇದ್ದಕ್ಕಿದ್ದಂತೆಯೇ ಪಾರ್ಶ್ವವಾಯು ಉಂಟಾಗಿತ್ತು. ಇದರಿಂದಾಗಿ ಮೆದುಳಿನ ಹಿಂಭಾಗಕ್ಕೆ ಹಾನಿಯಾಗಿತ್ತು. ಪತ್ನಿ ಪ್ರಿಯಾಂಕಾ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದರು. ತಮ್ಮ ಕೈಲಾದ ಎಲ್ಲ ಚಿಕಿತ್ಸೆಯನ್ನೂ ಕೊಡಿಸಿದರು. ಆದರೆ ಅವರ ಸ್ಥಿತಿ ಚೇತರಿಕೆ ಕಾಣಲಿಲ್ಲ. ಬದಲಾಗಿ ಮೆದುಳು ಇನ್ನಷ್ಟು ಹಾನಿಯಾಗಿತ್ತು.
ನಂತರ ಪ್ರಿಯಾಂಕಾ ಪತಿಯನ್ನುವಿಶೇಷ ಆರೈಕೆಗಾಗಿ ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಿದರು. ಮಣಿಪಾಲ್ ಆಸ್ಪತ್ರೆಯ
ಕ್ರಿಟಿಕಲ್ ಕೇರ್ ಮೆಡಿಸಿನ್‌ನ ಚೇರ್‌ಮೆನ್ ಆದ ಡಾ. ಸುನಿಲ್ ಕಾರಂತ್ ತಂಡವು ರಕ್ತದೊತ್ತಡ, ಶ್ವಾಸಕೋಶದ ಆರೈಕೆ ನೀಡಿತ್ತು. ಆದರೆ ವಿಧಿಯ ಆಟವೇ ಬೇರೆ ಇತ್ತು. ದಾಖಲಿಸಿದ ಕೆಲವು ದಿನಗಳಲ್ಲಿ ಕೃಷ್ಣ ಅವರನ್ನು ಬ್ರೈನ್ ಡೆಡ್ ಎಂದು ಡಿಕ್ಲೇರ್ ಮಾಡಲಾಯಿತು.
ಬ್ರೈನ್ ಡೆಡ್ ಎಂಬ ಬರಸಿಡಿಲು
ಇನ್ನೂ ನೂರು ಕಾಲ ಬಾಳಿ ಬದುಕಬೇಕಿದ್ದ ಕೃಷ್ಣ ಅವರು ಬ್ರೈನ್ ಡೆಡ್ ಎನ್ನುವ ವಿಷಯವನ್ನು ಅರಗಿಸಿಕೊಳ್ಳಲಾರದೆ ಪ್ರಿಯಾಂಕಾ ಕಣ್ಣೀರಿಟ್ಟರು. ಐದು ವರ್ಷದ ಮಗುವಿಗೆ ಅಪ್ಪನ ಪ್ರೀತಿ ಸಿಗಲಾರದ್ದನ್ನು ನೆನಪಿಸಿಕೊಂಡು ದುಃಖಿಸಿದರು. ಅಷ್ಟೆಲ್ಲಾ ದುಃಖ, ನೂರಾರು ಆಲೋಚನೆಗಳ ಮಧ್ಯೆಯೂ ಪ್ರಿಯಾಂಕಾ ಅಂಗಾಂಗ ದಾನದ ಬಗ್ಗೆ ಆಲೋಚಿಸಿದರು. ನನ್ನ ಪತಿಯ ಅಂಗಾಂಗಳು ಮತ್ತೊಬ್ಬರಿಗೆ ಹೊಸಜೀವನ ಕೊಡುತ್ತದೆ ಎನ್ನುವ ಸತ್ಯವನ್ನು ಅರಿತು, ನಿಸ್ವಾರ್ಥವಾಗಿ ಸೇವೆಗೆ ಸಿದ್ಧರಾದರು.
ಇನ್ನೆಲ್ಲೋ ಜೀವಂತವಾಗಿರಲಿ..
ಗ್ರಾಮೀಣ ಭಾಗದವರಾದ ಪ್ರಿಯಾಂಕಾಗೆ ಎಲ್ಲವೂ ಹೊಸದಾಗಿತ್ತು. ಆದರೆ ತನ್ನ ಗಂಡನ ಜೀವದ ಅಂಗಗಳು ಇನ್ನೆಲ್ಲೋ ಜೀವಂತವಾಗಿರುತ್ತವೆ ಎಂದು ಪ್ರಿಯಾಂಕಾ ಅಂಗಾಂಗ ದಾನಕ್ಕೆ ಒಪ್ಪಿದರು. ಅಂಗಾಂಗ ಕಸಿ ಕಾಯ್ದೆಯ ಪ್ರಕಾರ ಪ್ರಕ್ರಿಯೆಯು ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಯು ರಾಜ್ಯ ಅಂಗಾಂಗ ದಾನ ಪ್ರಾಧಿಕಾರವಾದ ಜೊತೆ ಕೆಲಸ ಮಾಡಿತು. ಎರಡು ಮೂತ್ರಪಿಂಡಗಳು, ಹೃದಯ, ಯಕೃತ್ತು ಮತ್ತು ಕಾರ್ನಿಯಾಗಳು ಸೇರಿದಂತೆ ದಾನ ಮಾಡಿದ ಅಂಗಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಯಿತು ಮತ್ತು ಹಲವಾರು ಜೀವಗಳನ್ನು ಉಳಿಸಲು ಸಹಾಯ ಮಾಡಿತು.
ಅಂಗಾಂಗ ದಾನದ ಬಗ್ಗೆ ವೈದ್ಯರು ಹೇಳೋದೇನು?
ತೀವ್ರವಾದ ಮೆದುಳಿನ ಗಾಯಗಳಾಗುವ ಕೇಸ್‌ಗಳಲ್ಲಿ ಕುಟುಂಬ ಆಘಾತಕ್ಕೆ ಒಳಗಾಗಿರುತ್ತಾರೆ. ಈಗಿನ್ನೂ ಚೆನ್ನಾಗಿದ್ದ ವ್ಯಕ್ತಿ ಇದೀಗ ಬ್ರೈನ್ ಡೆಡ್ ಅನ್ನುವುದನ್ನು ಅವರು ಅಕ್ಸೆಪ್ಟ್ ಮಾಡಲು ಸಮಯಬೇಕಾಗುತ್ತದೆ. ಆದರೆ ಈ ಕೇಸ್‌ಗಳಲ್ಲಿ ಅಂಗಾಂಗ ದಾನ ಮಾಡಬೇಕೆಂದರೆ ಅದಕ್ಕೆ ಹೆಚ್ಚು ಸಮಯ ಇರುವುದಿಲ್ಲ. ತಕ್ಷಣವೇ ನಿರ್ಧಾರ ಮಾಡಿ ಇಂತಿಷ್ಟು ಸಮಯದೊಳಗೆ ಅಂಗಾಂಗಗಳನ್ನು ತೆಗೆಯಬೇಕು. ತಮ್ಮ ನೋವಿನಲ್ಲಿಯೂ ಇದನ್ನೆಲ್ಲಾ ಅರ್ಥಮಾಡಿಕೊಂಡು ಇನ್ನೊಬ್ಬರ ಜೀವನಕ್ಕೆ ಜೀವ ಕೊಟ್ಟ ಕುಟುಂಬಕ್ಕೆ ನಾವು ಧನ್ಯವಾದ ಹೇಳಲೇಬೇಕು ಎಂದು ಕ್ರಿಟಿಕಲ್ ಕೇರ್ ಹಾಗೂ ಐಸಿಯುನ ಕನ್ಸಲ್ಟೆಂಟ್ ಡಾ. ನಾರಾಯಣ ಸ್ವಾಮಿ ಮಾಹಿತಿ ನೀಡಿದ್ದಾರೆ.
ಅಂಗಾಂಗ ದಾನ ಸಾವಿನಲ್ಲೂ ಸಾರ್ಥಕತೆ ಮೆರೆಯುವ ದಾರಿಯಾಗಿದೆ..