ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹೆಚ್ಚಳ ಇಡೀ ಜಗತ್ತಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಅಮೆರಿಕದ ಪರಮಾಪ್ತ ರಾಷ್ಟ್ರಗಳೇ ಈ ಕ್ರಮವನ್ನು ಟೀಕಿಸುತ್ತಿದೆ.
ಟ್ರಂಪ್ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಚೀನಾ, ಅಮೆರಿಕ ಉತ್ಪನ್ನಗಳ ಮೇಲೆ ಶೇ.34ರಷ್ಟು ಸುಂಕ ವಿಧಿಸುತ್ತೇವೆ ಎಂದು ಘೋಷಿಸಿದೆ. ಈ ಮೂಲಕ ತಿರುಗೇಟು ನೀಡಿದೆ.
ಇದೀಗ ಅಮೆರಿಕದ ಸುಂಕ ಹೆಚ್ಚಳಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿರುವ ಅಮೆರಿಕದ ಆಪ್ತ ರಾಷ್ಟ್ರಗಳಾದ ಫ್ರಾನ್ಸ್ ಮತ್ತು ಜರ್ಮನಿ ಸ್ನೇಹಕ್ಕಿಂತ ದೇಶ ಮುಖ್ಯ ಎಂದು ಹೇಳಿವೆ. ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಯುರೋಪಿಯನ್ ಒಕ್ಕೂಟ ಪ್ರತಿಕ್ರಿಯಿಸಬಹುದು ಎಂದು ಫ್ರಾನ್ಸ್ ಮತ್ತು ಜರ್ಮನಿ ತಿಳಿಸಿವೆ.
ಅಮೆರಿಕ ಸುಂಕ ಏರಿಕೆ ಕ್ರಮವನ್ನು ‘ಕ್ರೂರ ಮತ್ತು ಆಧಾರರಹಿತ’ ಎಂದು ಖಂಡಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ‘ಸುಂಕ ಏರಿಕೆ ಕ್ರೂರ ಮತ್ತು ಆಧಾರರಹಿತ. ಅಮೆರಿಕದಲ್ಲಿ ಫ್ರೆಂಚ್ ಹೂಡಿಕೆಗಳನ್ನು ಸ್ಥಗಿತಗೊಳಿಸಬಹುದು. ಎಲ್ಲ ಆಯ್ಕೆಗಳೂ ಇವೆ. ಯಾವುದನ್ನೂ ತಳ್ಳಿಹಾಕಲಾಗುವುದಿಲ್ಲ ಎಂಬ ಯೂರೋಪಿಯನ್ ನಾಯಕರ ಮಾತನ್ನು ನಾನು ಒಪ್ಪುತ್ತೇನೆ ಎಂದು ಹೇಳಿದರು.
ನಾವು ಪರಿಣಾಮಕಾರಿ ಮತ್ತು ಹೆಚ್ಚು ಪ್ರಮಾಣಾನುಗುಣವಾದದ್ದನ್ನು ಮಾಡಬೇಕು . ಆದರೆ ಈ ವಲಯಗಳು ಈ ಸುಂಕಗಳಿಗೆ ಬಲಿಯಾಗದಂತೆ ನಾವು ದೃಢನಿಶ್ಚಯ ಹೊಂದಿದ್ದೇವೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಜಪಾನ್ ಕೂಡ ಅಸಮಾಧಾನ
ಜಪಾನ್ ಮೇಲೆ ಕೂಡ ಅಮೆರಿಕ ಶೇ.24ರಷ್ಟು ಸುಂಕ ಹೇರಿದ್ದು ,ಈ ಸಂಬಂಧ ಜಪಾನ್ ಪ್ರಧಾನಿ ಶಿಗೆರು ಇಶಿಬಾ ಅಮೆರಿಕದೊಂದಿಗೆ ಚರ್ಚೆಗೆ ಮುಂದಾಗಿದ್ದಾರೆ. ಜಪಾನಿನ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಹೇರಿರುವ ಶೇ.24ರಷ್ಟು ಸಂಕದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.