ಹೊಸದಿಗಂತ ಮಡಿಕೇರಿ:
ತನ್ನ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ವಿನಯ್ ತನ್ನ ಅಂತಿಮ ಸಂದೇಶದಲ್ಲಿ ಹೆಸರಿಸಿರುವ ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗುವವರೆಗೂ ಮೃತನ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡದಿರಲು ನಿರ್ಧರಿಸಿದೆ.
ಕುಶಾಲನಗರದಲ್ಲಿ ವಿನಯ್ ಮೃತದೇಹದ ಅಂತಿಮ ದರ್ಶನ ಪಡೆದ ಬಿಜೆಪಿ ರಾಜಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಈ ಸಂಬಂಧ ಪೊಲೀಸರಿಗೆ ಒಂದು ಗಂಟೆಯ ಕಾಲಾವಕಾಶ ನೀಡಿದ್ದಾರೆ. ಪೊಲೀಸರು ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಲು ಅರ್ಧ ಗಂಟೆಯವರೆಗೂ ಶಾಂತಿಯುತವಾಗಿ ಕಾಯುವುದಾಗಿ ಹೇಳಿದ ಅವರು, ಎಫ್.ಐ.ಆರ್’ನಲ್ಲಿ ಶಾಸಕರ ಹೆಸರು ಉಲ್ಲೇಖವಾಗುವರೆಗೆ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ತುಘಲಕ್ ಸರ್ಕಾರ ನಡೆಸುತ್ತಿದೆ. ಸ್ಥಳೀಯ ಶಾಸಕರ ವೈಫಲ್ಯವನ್ನು ಎತ್ತಿ ಹಿಡಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಹಾಕಿಸಿ ಹಿಂಸೆ ನೀಡಲಾಗಿದೆ ಎಂದ ಅವರು, ಸ್ಥಳೀಯ ಶಾಸಕರ ವೈಫಲ್ಯ ಎತ್ತಿ ಹಿಡಿದಿದ್ದೇ ತಪ್ಪಾ..? ಎಂದು ಪ್ರಶ್ನಿಸಿದರು.
ಉಚ್ಛ ನ್ಯಾಯಾಲಯದಲ್ಲಿ ಜಾಮೀನು ದೊರಕಿದ್ದರೂ, ಮನೆಗೆ ಪೊಲೀಸರನ್ನು ಕಳುಹಿಸಿ ವಿನಯ್’ಗೆ ಮಾನಸಿಕವಾಗಿ ಹಿಂಸೆ ನೀಡಲಾಗಿದೆ. ಶಾಸಕರಾಗಿರುವ ಪೊನ್ನಣ್ಣ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು. ಮಂಥರ್ ಗೌಡ ಪ್ರಭಾವಿ ಶಾಸಕರು. ಈ ಇಬ್ಬರು ಶಾಸಕರ ದಬ್ಬಾಳಿಕೆಯಿಂದ ನಮ್ಮ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ಈ ಪ್ರಕರಣವನ್ನು ನಾವು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಬೆಂಗಳೂರಿನ ಎಫ್.ಐ.ಆರ್’ನಲ್ಲಿ ಶಾಸಕರ ಹೆಸರು ಬಿಟ್ಟಿರುವ ಅಧಿಕಾರಿ ಅಯೋಗ್ಯ. ಈ ಹಿಂದೆ ನಡೆದ ಆತ್ಮಹತ್ಯೆ ಪ್ರಕರಣಗಳು ಏನಾಗಿದೆ ಎಂಬುದು ರಾಜ್ಯದ ಜನರ ಗಮನದಲ್ಲಿದೆ. ಎಫ್.ಐ.ಆರ್’ನಲ್ಲಿ ಶಾಸಕರ ಹೆಸರು ಉಲ್ಲೇಖವಾಗುವರೆಗೆ ಅಂತ್ಯಸಂಸ್ಕಾರ ಮಾಡುವುದಿಲ್ಲ. ಅರ್ಧ ಗಂಟೆ ಶಾಂತಿಯುತವಾಗಿ ಕಾಯುತ್ತೇವೆ. ಪೊಲೀಸರಿಗೆ ಒಂದು ಗಂಟೆಗಳ ಗಡುವು ನೀಡುತ್ತೇವೆ ಎಂದು ಹೇಳಿದರು.
ಬಿಗು ಪೊಲೀಸ್ ಬಂದೋಬಸ್ತ್: ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರದಲ್ಲಿ ಭಾರೀ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಗಿದೆ. ಪ್ರತಿಭಟನಾಕಾರರನ್ನು ಎದುರಿಸಲು ಖಾಕಿ ಪಡೆಯೂ ಸಜ್ಜಾಗಿದೆ.
ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ, ಮೈಸೂರು ಎಸ್ಪಿ ವಿಷ್ಣುವರ್ಧನ್,ಹಾಸನ ಎಸ್ಪಿ ಸುಜೀತಾ ಸಲ್ಮಾನ್, ಹಾಸನ, ಮಂಡ್ಯ ಜಿಲ್ಲೆಗಳ ಅಡಿಷನಲ್ ಎಸ್ಪಿಗಳು, ಮೈಸೂರು ಕ್ರೈಂ ವಿಭಾಗದ ಡಿಸಿಪಿ, 400 ಸಿವಿಲ್ ಪೊಲೀಸರು, ಐದು ಕೆಎಸ್ಆರ್’ಪಿ ತುಕಡಿಗಳು, ಜಿಲ್ಲಾ ಸಶಸ್ತ್ರ ಪಡೆಯ ನಾಲ್ಕು ತಂಡಗಳು ಕುಶಾಲನಗರದಲ್ಲಿ ಬೀಡುಬಿಟ್ಟಿದ್ದು, ಕುಶಾಲನಗರ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕದಂತೆ ಪೊಲೀಸ್ ಕಟ್ಟೆಚ್ಚರವಹಿಸಿದ್ದಾರೆ.
ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆ ಮಧ್ಯೆ ಬ್ಯಾರಿಕೆಡ್ ಅಳವಡಿಸಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಸೇರಿದಂತೆ ಜಿಲ್ಲಾ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ವಿನಯ್ ಆತ್ಮಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಯದುವೀರ್ ಸೇರಿದಂತೆ ಬಿಜೆಪಿ ಪ್ರಮುಖರು ಪಟ್ಟು ಹಿಡಿದಿದ್ದಾರೆ.