ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮೂವರು ಭಯೋತ್ಪಾದಕರ ಗುಂಪು ಇರುವಿಕೆ ಕುರಿತು ಮಾಹಿತಿ ಲಭ್ಯವಾಗಿದ್ದು, ಉಗ್ರರನ್ನು ನಿಗ್ರಹಿಸಲು ಭದ್ರತಾ ಪಡೆ ತೀವ್ರ ಚಳಿ, ದಟ್ಟ ಹಿಮಪಾತದ ನಡುವೆಯೂ ಚತ್ರೂ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ದೇಶ ವಿರೋಧಿ ಶಕ್ತಿಗಳು ಇಂಟರ್ನೆಟ್ ದುರುಪಯೋಗ ಮಾಡಿಕೊಳ್ಳುವುದನ್ನು ತಪ್ಪಿಸಲು, ಜಿಲ್ಲೆಯ ಸಿಂಗ್‌ಪೋರಾ, ಚಿಂಗಮ್ ಮತ್ತು ಚತ್ರೂ ಸೇರಿದಂತೆ ಸುಮಾರು 6 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಪ್ರೇಮಿಗಳ ದಿನ ಹತ್ತಿರ ಬರ್ತಿದೆ! ನಿಮ್ಮಾಕೆಗೆ ಪ್ರಪೋಸ್ ಮಾಡೋಕೆ ಇದಕ್ಕಿಂತ ಒಳ್ಳೆ ಪ್ಲೇಸ್ ಇದ್ಯಾ?
ಜನವರಿ 18ರಂದು ಭದ್ರತಾ ಪಡೆ ಈ ಕಾರ್ಯಾಚರಣೆ ಆರಂಭಿಸಿದ್ದು, ಮಂದ್ರಲ್-ಸಿಂಗ್‌ಪೋರಾ ಬಳಿಯ ಸೋನ್ನಾರ್ ಅರಣ್ಯದಲ್ಲಿ ಭೀಕರ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಒಬ್ಬ ಪ್ಯಾರಾಟ್ರೂಪರ್ ಸಾವನ್ನಪ್ಪಿದ್ದು, ಏಳು ಮಂದಿ ಸೈನಿಕರು ಗಾಯಗೊಂಡಿದ್ದರು. ಈ ನಡುವೆ ದಟ್ಟವಾದ ಅರಣ್ಯ ಪ್ರದೇಶ ಭಯೋತ್ಪಾದಕರು ತಪ್ಪಿಸಿಕೊಂಡರು. ಆದರೂ ಕೂಡ ಹಿಮಪಾತದ ನಡುವೆ ಭದ್ರತಾ ಪಡೆ ಭಯೋತ್ಪಾದಕರಿಗಾಗಿ ಹುಡುಕಾಟ ಮುಂದುವರೆಸಿದೆ.
ಜನವರಿ 22ರಂದು ಮಾಲಿ ಡಾನಾ ಟಾಪ್ ಮತ್ತು ಜನವರಿ 25ರಂದು ಜಾನ್ಸೀರ್ -ಕಂಡಿವಾರ್‌ನಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಎರಡು ಎನ್‌ಕೌಂಟರ್‌ಗಳು ನಡೆದಿದ್ದು, ಈ ವೇಳೆ ಕೂಡ ಭಯೋತ್ಪಾದಕರು ತಪ್ಪಿಸಿಕೊಂಡು ಅರಣ್ಯ ಪ್ರದೇಶದಲ್ಲಿ ಕಣ್ಮರೆಯಾಗಿದ್ದರು.



