ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆ ರಜೆ ಕಳೆಯಲು ಪ್ರವಾಸಕ್ಕೆ ತೆರಳುವ ಮುನ್ನ ನಿಮ್ಮ ಮನೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ದೀರ್ಘಕಾಲ ಪ್ರವಾಸಕ್ಕೆ ತೆರಳುವ ಬೆಂಗಳೂರಿಗರು ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಉತ್ತಮ ಎಂದು ಕಿವಿಮಾತು ಹೇಳಿದ್ದಾರೆ.
ಸೂಚನೆಗಳೇನು?
ಮನೆಯಿಂದ ಹೊರಹೋಗುವ ಮುನ್ನ ಮನೆಯ ಕಿಟಕಿ. ಬಾಗಿಲು ಗೇಟ್‌ಗಳನ್ನು ಲಾಕ್ ಮಾಡಿ. ಮತ್ತು ಕೀಗಳನ್ನು ಮನೆಯ ಹೊರಗೆ ಹೂಕುಂಡ ಅಥವಾ ಪಾದರಕ್ಷೆಗಳು ಅಥವಾ ಡೋರ್ ಮ್ಯಾಟ್ ಕೆಳಗೆ ಮತ್ತಿತರ ಕಡೆಗಳಲ್ಲಿ ಬಚ್ಚಿಡಬೇಡಿ.
ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೆ, ಅವು ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ಮನೆಯ ಆಯಕಟ್ಟಿನ ಸ್ಥಳಗಳ ಮೇಲೆ ನಿಗಾವಹಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಸಾಮಾಜಿಕ ಜಾಲತಾಣಗಳನ್ನು ಯಾರು ಬೇಕಿದ್ದರೂ ವೀಕ್ಷಿಸಬಹುದಾಗಿರುವುದರಿಂದ ನಿಮ್ಮ ಪ್ರವಾಸದ ರೂಪುರೇಷೆಗಳು, ದಿನಾಂಕಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಿರಿ.
ಹಳೆಯ ಬೀಗಗಳನ್ನು ಬಳಸುವ ಬದಲು ಸುರಕ್ಷತೆಗೆ ಆದ್ಯತೆ ನೀಡಿ, ಹೆಚ್ಚು ಉತ್ತಮ ಗುಣಮಟ್ಟದ ಬೀಗಗಳನ್ನು ಬಳಸಿ. ಹೊರಭಾಗದಲ್ಲಿ ಗೋಚರಿಸುವ ಬೀಗಗಳ ಬಳಕೆಯನ್ನು ತಪ್ಪಿಸಿ. ಮನೆಯ ಮುಖ್ಯ ಗೇಟ್‌ನ್ನು ಲಾಕ್ ಮಾಡದಿರುವುದು ಸೂಕ್ತ, ಅದು ಮನೆಯಲ್ಲಿ ಯಾರೂ ಇಲ್ಲ ಎಂದು ಕಳ್ಳರಿಗೆ ಸುಲಭವಾಗಿ ತಿಳಿಯಲು ಅನುಕೂಲವಾಗಬಹುದು.
ಮನೆಯ ಮುಂದೆ ದಿನಪತ್ರಿಕೆಗಳು, ಹಾಲಿನ ಪ್ಯಾಕೆಟ್‌ಗಳು ಸಂಗ್ರಹವಾಗಲು ಬಿಡದಿರಿ. ಅವುಗಳ ಪೂರೈಕೆದಾರರಿಗೆ ನೀವು ಮನೆಯಲ್ಲಿ ಇರದಿರುವುದರ ಕುರಿತು ಮಾಹಿತಿ ನೀಡುವುದು ಸೂಕ್ತ. ಮನೆಯಲ್ಲಿ ಯಾರಾದರೂ ಇದ್ದಾರೆ ಎಂಬ ಭಾವನೆ ಮೂಡಿಸಲು ಮನೆಯೊಳಗಿನ ಒಂದಾದರೂ ದೀಪವನ್ನು/ಲೈಟ್ ಬೆಳಗಿಸಿಡುವುದು ಸೂಕ್ತ. ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿಡುವ ಬದಲು ಬ್ಯಾಂಕ್ ಲಾಕರ್ ಸೌಲಭ್ಯ ಬಳಸಿ.
ಕಳ್ಳತನ ಪತ್ತೆ ಅಥವಾ ಒಳನುಗ್ಗುವಿಕೆ ತಪ್ಪಿಸಲು ಆಧುನಿಕ ತಂತ್ರಜ್ಞಾನವಿರುವ ಸಾಧನಗಳನ್ನು ಬಳಸಬಹುದು. ಸಾಧ್ಯವಾದರೆ ಸ್ಥಳೀಯ ಪೊಲೀಸರು ಅಥವಾ ನೆರೆಹೊರೆಯ ಕಾವಲು ಪಡೆಗಳೊಂದಿಗೆ ಕೈಜೋಡಿಸಿ ಎಂದು ಆಯುಕ್ತರು ಮನವಿ ಮಾಡಿದ್ದಾರೆ.