ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ಧ ಅವಹೇಳನಕಾರಿ ಮಾತುಗಳಿಗೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈಗ ಕುನಾಲ್ ಕಾಮ್ರಾ ಗೆ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನಿನ ಅವಧಿಯನ್ನು ಏಪ್ರಿಲ್ 17ರವರೆಗೆ ಮದ್ರಾಸ್ ಹೈಕೋರ್ಟ್ ವಿಸ್ತರಿಸಿದೆ. ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ‘ಕಾಮ್ರಾ ಸಂಬಂಧಪಟ್ಟ ಕೋರ್ಟ್ ಮೊರೆ ಹೋಗಲು ಕ್ರಮ ಕೈಗೊಳ್ಳಬಹುದು’ ಎಂದು ತಿಳಿಸಿದ್ದಾರೆ.
ಕಾಮ್ರಾ ಪರ ವಕೀಲ ವಿ.ಸುರೇಶ್ ‘ನನ್ನ ಕಕ್ಷಿದಾರರ ವಿರುದ್ಧ ಮತ್ತೆ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಮುಂಬೈನಲ್ಲಿರುವ ಅವರ ಪೋಷಕರ ನಿವಾಸಕ್ಕೆ ಅಧಿಕಾರಿಗಳೂ ಭೇಟಿ ನೀಡಿ, ವಯಸ್ಸಾದ ಪೋಷಕರಿಗೆ ತೊಂದರೆ ನೀಡಿದ್ದಾರೆ. ಈ ಮೂಲಕ ಕಾಮ್ರಾ ಅವರ ಮೇಲಿನ ದ್ವೇಷ ಮುಂದುವರಿದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಶಿಂದೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಶಿವಸೇನಾ ಶಾಸಕ ಮುರ್ಜಿ ಪಟೇಲ್ ನೀಡಿದ ದೂರಿನ ಮೇರೆಗೆ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಕಾಮ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.