ಹೊಸದಿಗಂತ ಡಿಜಿಟಲ್ ಡೆಸ್ಕ್:
2020ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದಿದ್ದ ಐವರ ಕೊಲೆ ಪ್ರಕರಣ ಸಂಬಂಧ ಕೋರ್ಟ್ ಇಂದು(ಏಪ್ರಿಲ್ 08) ತೀರ್ಪು ನೀಡಿದ್ದು, ಐವರ ಕೊಲೆ ಹಾಗೂ ಇಬ್ಬರ ಕೊಲೆ ಯತ್ನ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಸಿಂಧನೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರ ವಾದ, ಪ್ರತಿವಾದ ಪರಿಶೀಲಿಸಿ ಮೂವರಿಗೆ ಮರಣ ದಂಡನೆ ಹಾಗೂ ತಲಾ 47 ಸಾವಿರ ರೂ.ದಂಡ ಹಾಗೂ 9 ಜನರಿಗೆ ಜೀವಾವಧಿ ಶಿಕ್ಷೆ ಜೊತೆಗೆ ತಲಾ 97,500 ರೂ.ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
A-1 ಆರೋಪಿ ಸಣ್ಣ ಫಕೀರಪ್ಪ, A- 2 ಅಂಬಣ್ಣ, A-3 ಸೋಮಶೇಖರ್ ಗೆ ಗಲ್ಲು ಶಿಕ್ಷೆಯಾಗಿದ್ದರೆ, ಇನ್ನುಳಿದಂತೆ A- 4 ರೇಖಾ, A-5 ಗಂಗಮ್ಮ, A- 6 ದೊಡ್ಡ ಫಕೀರಪ್ಪ, A-7 ಹನುಮಂತ, A-8 ಹೊನ್ನೂರಪ್ಪ, A-9 ಬಸಲಿಂಗಪ್ಪ, A- 10 ಅಮರೇಶ್,A- 11- ಶಿವರಾಜ್, A- 12 ಪರಸಪ್ಪಗೆ ಜೀವಾವಧಿ ಶಿಕ್ಷೆ ಜೊತೆ ದಂಡ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಮೃತ ಈರಪ್ಪನ ಮಗ ಮೌನೇಶ ಎನ್ನುವಾತ ಸಣ್ಣ ಪಕೀರಪ್ಪ ಕೊನದವರು ಎನ್ನುವ ಕೊಲೆ ಆರೋಪಿಯ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಹಿನ್ನೆಲೆಯಲ್ಲಿ ಜುಲೈ 11 ನೇ 2020 ರಂದು ಸಂಜೆ 04-45 ಗಂಟೆ ಸುಮಾರಿಗೆ ಸಣ್ಣ ಪಕೀರಪ್ಪ ಸೇರಿ ಎಲ್ಲ ಆರೋಪಿತರು ಸಿಂಧನೂರು ನಗರದ ಸುಕಾಲಪೇಟೆಯ ಹಿರೇಲಿಂಗೇಶ್ವರ ಕಾಲೊನಿಯಲ್ಲಿಈರಪ್ಪನ ಮನೆಗೆ ನುಗ್ಗಿ ಸಿಕ್ಕಿಸಿಕ್ಕವರ ಮೇಲೆ ದಾಳಿ ಮಾಡಿದ್ದು, ಈರಪ್ಪ ಆತನ ಪತ್ನಿ ಸುಮಿತ್ರಮ್ಮ. ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳಾದ ಶ್ರೀದೇವಿ ಅವರನ್ನು ಕೊಲೆ ಮಾಡಿದ್ದರು. ಅಲ್ಲದೇ ಮೃತ ಈರಪ್ಪನ ಸೊಸೆಯಾದ ರೇವತಿ ಹಾಗೂ ಆತನ ಮಗಳಾದ ತಾಯಮ್ಮ ಮೇಲೂ ಮಾರಾಣಾಂತಿಕೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಈ ಕುರಿತು ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.