ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಕಂಡಿದ್ದು, ಈ ಬೆಳವಣಿಗೆ ಗದಗ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೆಜಿಗೆ 30 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ.ಗೆ ಮಾರಾಟವಾಗುತ್ತಿದೆ.
ಪೂರ್ವ ಮುಂಗಾರು ಮಳೆಯ ಪರಿಣಾಮ ಕಳೆದ ವಾರದಿಂದ ಬೆಲೆಗಳು ಕುಸಿಯಲು ಪ್ರಾರಂಭಿಸಿದೆ. ಈ ಬಾರಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹೆಚ್ಚು ರೈತರು ಟೊಮೆಟೊ ಬೆಳೆದಿದ್ದಾರೆ. ಜತೆಗೆ, ಬಿಸಿಲ ವಾತಾವರಣದಿಂದಾಗಿ ಕಾಯಿಗಳು ಬೇಗ ಹಣ್ಣಾಗುತ್ತವೆ. ಅಲ್ಲದೆ, ಹೊರರಾಜ್ಯಗಳಲ್ಲೂ ಟೊಮೆಟೊ ಹೆಚ್ಚಾಗಿ ಬೆಳೆದಿರುವುದರಿಂದ ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಹಣ್ಣು ರವಾನೆಯಾಗುತ್ತಿಲ್ಲ. ಹೀಗಾಗಿ, ಮಾರುಕಟ್ಟೆಗೆ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆಯಿಲ್ಲದೆ ಬೆಲೆಗಳು ಕುಸಿದಿವೆ ಎಂದು ತಿಳಿದುಬಂದಿದೆ.
ಬೆಲೆ ಕುಸಿತ ಹಿನ್ನೆಲೆಯಲ್ಲಿ ಗದಗದ ಹಲವಾರು ರೈತರು ಎಪಿಎಂಸಿ ಅಂಗಡಿ ಮಾಲೀಕರ ವಿರುದ್ಧ ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳು ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.