ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ರಾಜಧಾನಿ ಬೆಂಗಳೂರಿನ 2ನೇ ಏರ್ ಪೋರ್ಟ್ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ಗುರುತಿಸಿದ್ದ 3 ಸ್ಥಳಗಳ ಪರಿಶೀಲನೆ ನಡೆಸಿರುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡವು ಮುಂದಿನ ಒಂದು ತಿಂಗಳಲ್ಲಿ ತನ್ನ ಅಭಿಪ್ರಾಯ ತಿಳಿಸುವ ಸಾಧ್ಯತೆಯಿದೆ. ಬಳಿಕ ಸರಕಾರವು ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಅಂತಿಮಗೊಳಿಸಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಎಐ ತಂಡ ಬಂದು ಹೋಗಿರುವುದು ನಿಜ. ವಿಮಾನ ನಿಲ್ದಾಣವನ್ನು ಎಲ್ಲಿ ಮಾಡಿದರೆ ಸೂಕ್ತವೆನ್ನುವುದು ಪ್ರಯಾಣಿಕರ ದಟ್ಟಣೆ, ಕಾರ್ಗೋ ದಟ್ಟಣೆ ಮತ್ತು ಕೈಗಾರಿಕಾ ಅಗತ್ಯ ಮುಂತಾದ ಅಂಶಗಳನ್ನು ಅವಲಂಬಿಸಿದೆ. ಈಗ ದೇವನಹಳ್ಳಿ ಬಳಿ ವಿಮಾನ ನಿಲ್ದಾಣವಿದೆ. 2033ರವರೆಗೂ ಇಲ್ಲಿಂದ 150 ಕಿ.ಮೀ. ಅಂತರದಲ್ಲಿ ಇನ್ನೊಂದು ಏರ್ಪೋರ್ಟ್ ಮಾಡಬಾರದು ಎನ್ನುವ ಷರತ್ತಿದೆ. ನಾವು ಈಗಿನಿಂದಲೇ ಪ್ರಾರಂಭಿಸಿದರೆ, 2030ರ ವೇಳೆಗೆ ಎರಡನೇ ಏರ್ಪೋರ್ಟ್ ಅಭಿವೃದ್ಧಿ ಪ್ರಾರಂಭಿಸಬಹುದು. ಇಲ್ಲದೆ ಹೋದರೆ 2040ನೇ ಇಸವಿ ಬಂದರೂ ವಿಮಾನ ನಿಲ್ದಾಣ ಆಗುವುದಿಲ್ಲ ಎಂದು ವಿವರಿಸಿದರು.
ಹಿರಿಯ ನಾಯಕ ಟಿ ಬಿ ಜಯಚಂದ್ರ ಅವರು ತಮ್ಮ ಕ್ಷೇತ್ರವಾದ ಶಿರಾ ಸಮೀಪ ಏರ್ಪೋರ್ಟ್ ನಿರ್ಮಾಣ ಮಾಡಬೇಕು ಎಂದು ತಮ್ಮ ಪ್ರಯತ್ನವನ್ನು ಶುರು ಮಾಡಿದ್ದಾರೆ. ಅಲ್ಲಿ ಜಿಲ್ಲಾ ಮಟ್ಟದ ಏರ್ಪೋರ್ಟ್ ಮಾಡಬಹುದೇ ವಿನಃ, ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಆಗುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಸುಪ್ರೀಂಕೋರ್ಟಿನಲ್ಲಿ ಪರಿಸರ ಇಲಾಖೆಯ ಅನುಮತಿ ಸಂಬಂಧ ಒಂದು ಪ್ರಕರಣವಿದೆ. ಅದು ಸದ್ಯದಲ್ಲೇ ಇತ್ಯರ್ಥಗೊಳ್ಳುವ ಲಕ್ಷಣಗಳಿವೆ. ಇದಾದರೆ, ಇನ್ನು 6 ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.