ಅಮೆರಿಕ ಸುಂಕ ನೀತಿ: ಚೀನಾ ಬಿಟ್ಟು ಉಳಿದ ದೇಶಗಳಿಗೆ 90 ದಿನಗಳವಿರಾಮ ಘೋಷಿಸಿದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿಶ್ವದ ಬೇರೆ ರಾಷ್ಟ್ರಗಳಿಂದ ಆಮದಾಗುವ ಎಲ್ಲಾ ಉತ್ಪನ್ನಗಳ ಮೇಲೆ ಸುಂಕದ ಸಮರ ಸಾರಿದ್ದರು. ಈಗ ಆ ಸಮರಕ್ಕೆ 90 ದಿನಗಳ ಕಾಲ ವಿರಾಮ ಘೋಷಿಸಿದ್ದಾರೆ.

ಚೀನಾ ಹೊರತುಪಡಿಸಿ ವಿವಿಧ ದೇಶಗಳ ಮೇಲೆ ಹೇರಿದ್ದ ಆಮದ ಸುಂಕಕ್ಕೆ 90 ದಿನಗಳ ಕಾಲ ಅಂದ್ರೆ ಮೂರು ತಿಂಗಳುಗಳ ಕಾಲ ವಿರಾಮ ಘೋಷಿಸಿದ್ದಾರೆ.

ಅಮೆರಿಕಾದ ವ್ಯಾಪಾರ ಒಪ್ಪಂದಗಳು ಅಸಮೋತಲನಕ್ಕೆ ಈಡಾಗುವ ಆತಂಕ ಟ್ರಂಪ್ ಸರ್ಕಾರಕ್ಕೆ ಕಾಡುತ್ತಿದೆ. ಸುಮಾರು 75 ದೇಶಗಳು ಟ್ರಂಪ್ ಸುಂಕದ ನೀತಿಯಲ್ಲಿ ಮಾತುಕತೆ ನಡೆಸಿವೆ ಆದರೆ ಸುಂಕದ ವಿರುದ್ಧ ಸೇಡಿನ ಮಾತನ್ನು ಆಡಿಲ್ಲ. ಕೆಲವು ದಿನಗಳ ಕಾಲ ಇದಕ್ಕೆ ವಿರಾಮ ಹೇರುವಂತೆ ಮಾತುಕತೆಗಳು ನಡೆದಿವೆ, ಇದೇ ಹಿನ್ನೆಲೆಯಲ್ಲಿ ಟ್ರಂಪ್​ ಸುಂಕ ಸಮರಕ್ಕೆ ಸುಮಾರು 90 ದಿನಗಳ ಕಾಲ ವಿರಾಮ ಘೋಷಿಸಿದ್ದಾರೆ.

ಆದ್ರೆ ಚೀನಾ ವಿಷಯದಲ್ಲಿ ಟ್ರಂಪ್ ವ್ಯಾಪಾರ ಮನಸ್ಥಿತಿ ಹಾಗೆಯೇ ಉಳಿದಕೊಂಡಿದೆ. ತಕ್ಷಣಕ್ಕೆ ಚೀನಾದ ಮೇಲೆ ಸುಮಾರು 125 ಪರ್ಸೆಂಟ್​ನಷ್ಟು ಆಮದು ಸುಂಕ ಹೇರಿದ್ದಾರೆ. ಈ ಹಿಂದೆ ಇದು ಶೇಕಡಾ 104ರಷ್ಟಿತ್ತು.

ಕೆಲವು ದಿನಗಳಿಂದ ರಿಪಬ್ಲಿಕನ್ ಪಾರ್ಟಿಯ ಕೆಲವು ಮುಖ್ಯ ನಾಯಕರು ಹಾಗೂ ಉದ್ಯಮಿಗಳು ಡೊನಾಲ್ಡ್​ ಟ್ರಂಪ್​​ಗೆ ಈ ಸುಂಕದ ಹೇರಿಕೆಯನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಈ ತೆರಿಗೆ ಸಮರ ಮುಂದುವರಿದರೆ ದೊಡ್ಡ ಮಟ್ಟದ ಜಾಗತಿಕ ವ್ಯಾಪಾರದ ಯುದ್ಧವೊಂದು ಶುರುವಾಗುವ ಭೀತಿಯನ್ನು ಅವರು ಟ್ರಂಪ್​ಗೆ ಮನವರಿಕೆ ಮಾಡಿದ್ದಾರೆ. ಅದು ಮಾತ್ರವಲ್ಲ ಜಾಗತಿಕ ಮಾರುಕಟ್ಟೆ ಭವಿಷ್ಯದಲ್ಲಿ ಕುಸಿದು ಬೀಳುವ ಆತಂಕವನ್ನು ವ್ಯಕ್ತಪಡಿಸಿದ್ದು ಇದರಿಂದ ಟ್ರಂಪ್ ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಟ್ರಂಪ್ ಈ ತಮ್ಮ ತೆರಿಗೆ ನೀತಿಗೆ 90 ದಿನಗಳ ಕಾಲ ವಿರಾಮ ನೀಡಿದ ಬೆನ್ನಲ್ಲಿಯೇ ಯುಎಸ್​ನ ಷೇರು ಮಾರುಕಟ್ಟೆಗೆ ಕೊಂಚ ಚೇತರಿಕೆ ಬಂದಿದೆ. ವಾಲ್​ ಸ್ಟ್ರೀಟ್ ಸ್ಟಾಕ್ ಮಾರ್ಕೆಟ್​ನಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು ಅಮೆರಿಕಾದ ಹೂಡಿಕೆದಾರರು ಕೊಂಚ ನಿರಾಳರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಷೇರು ಮಾರುಕಟ್ಟೆ ದೊಡ್ಡ ಮಟ್ಟದ ಹೊಡೆತ ಕಂಡಿತ್ತು.

ಇದು ಭಾರತಕ್ಕೂ ಕೂಡ ಕೊಂಚ ನಿರಾಳ ತಂದಿಟ್ಟಿದೆ. ಈಗಾಗಲೇ ದೆಹಲಿ ಮತ್ತು ವಾಷಿಂಗ್ಟನ್​ ನಡುವೆ ತೆರಿಗೆ ವಿಚಾರವಾಗಿ ದೊಡ್ಡ ಮಟ್ಟದ ಮಾತುಕತೆಗಳು ನಡೆದಿದ್ದವು. ಅದನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಮುಂದುವರಿಸಲು ಭಾರತಕ್ಕೆ ಅವಕಾಶ ಸಿಕ್ಕಾಂತಾಗಿದೆ ಎಂದು, ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ವಕ್ತಾರ ರನ್ದೀರ್ ಜೈಸ್ವಾಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here