ಹೊಸದಿಗಂತ ವರದಿ, ಜಮಖಂಡಿ:
ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚರಂಡಿ ನೀರಿನಲ್ಲಿ ಮಕ್ಕಳು ತಮ್ಮ ಬಿಸಿಯೂಟದ ತಟ್ಟೆಯನ್ನು ತೊಳೆದುಕೊಳ್ಳವ ಫೋಟೋ ವೈರಲ್ ಆಗಿದ್ದು, ಇದಕ್ಕೆ ಅನೇಕ ಪಾಲಕರೂ ಸಹ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಈ ತರಹದ ಘಟನೆ ನಡೆದಿದ್ದು, ನಮ್ಮ ಗಮನಕ್ಕೆ ಬಂದಿದೆ ಮತ್ತು ಸಾರ್ವಜನಿಕರಿಂದ ದೂರು ಸಹ ಬಂದಿದ್ದು ನಮ್ಮ ಶಿಕ್ಷಣ ಸಂಯೋಜಕರನ್ನು ಪರಿಶೀಲನೆಗೆ ಕಳುಹಿಸಿದ್ದೇವೆ. ಈ ಘಟನಗೆ ಸಂಬಂಧಿಸಿದಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದೇವೆ. ಅವರು ಸಮರ್ಪಕ ಉತ್ತರ ನೀಡದಿದರೆ ಅವರ ಮೇಲೆ ಶಿಸ್ತು ಕ್ರಮಕ್ಕೆ ಮೇಲಾಽಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕೊಳಚೆ ನೀರು ಕಂಡರೂ ಅದು ಶಾಲಾ ಆವರಣದಲಿರುವ ಶುದ್ಧ ಕುಡಿಯುವ ನೀರಿನ ಘಟಕದ ತ್ಯಾಜ್ಯ ನೀರಾಗಿದೆ. ಅದರಲ್ಲೂ ಸಹ ಯಾರೂ ತಟ್ಟೆ ತೊಳೆಯಬಾರದು. ಅದಕ್ಕಾಗಿ ಗ್ರಾಮ ಪಂಚಾಯತಿಯವರಿಗೆ ತಿಳಿಸಿ ಅದನ್ನು ಸರಿಪಡಿಸುತ್ತೇವೆ. ಇನ್ನೊಮ್ಮೆ ಈ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.



