ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪರೂಪದ ಮತ್ತು ಸವಾಲಿನ ಆರೋಗ್ಯ ಸಮಸ್ಯೆಯಾದ ನೆಸಿಡಿಯೋಬ್ಲಾಸ್ಟೋಸಿಸ್ (nesidioblastosis) ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಸದ್ಯ ಯುವತಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ನುರಿತ ತಜ್ಞರಾದ ಕನ್ಸಲ್ಟೆಂಟ್ ಸರ್ಜಿಕಲ್ ಆನ್‌ಕೋಲಾಜಿಸ್ಟ್ ಕಾರ್ತಿಕ್ ಕೆ. ಎಸ್. ಅವರ ತಂಡ ಈ ಆರೋಗ್ಯ ಸಮಸ್ಯೆಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆ ಮಹತ್ವದ ಮೈಲಿಗಲ್ಲು ಸಾಧಿಸಿದೆ.
26 ವರ್ಷದ ಯುವತಿ ಹೈಪೊಗ್ಲಿಸಿಮಿಯಾ (ಕಡಿಮೆ ರಕ್ತದಲ್ಲಿನ ಸಕ್ಕರೆ) ಎಂಬ ಮಾರಣಾಂತಿಕ ಕಾಯಿಲೆಯೊಂದಿಗೆ ಕಳೆದ 6 ವರ್ಷಗಳಿಂದ ಹೋರಾಡುತ್ತಿದ್ದರು. ಈ ಕಾಯಿಲೆ ಅಪರೂಪದ್ದಾಗಿದ್ದು O.3 ಮಿಲಿಯನ್ ಜನರಲ್ಲಿ ಕಾಣಿಸಿಕೊಳ್ಳುವಂತದ್ದು. ಈ ಸಮಸ್ಯೆ ಮಾರಣಾಂತಿಕವೂ ಆಗಿದೆ. ಈ ಕಾಯಿಲೆ ಹೊಂದಿದವರಲ್ಲಿ ಮೇದೋಜೀರಕ ಗ್ರಂಥಿ (ಪ್ಯಾನ್‌ಕ್ರಿಯಾಸ್) ನಲ್ಲಿ ಇನ್ಸುಲಿನ್ ಪ್ರಮಾಣ ಅತಿಯಾಗಿ ಉತ್ಪಾದನೆಯಾಗುತ್ತದೆ, ಇದರಿಂದ ಪದೇ ಪದೇ ಹಾಗೂ ತೀವ್ರವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತದೆ.
ಡಾ. ಕಾರ್ತಿಕ್ ಕೆ.ಎಸ್., ಕನ್ಸಲ್ಟೆಂಟ್ ಜಿಐ ಸರ್ಜನ್ ಡಾ. ಸತ್ಯನಾರಾಯಣ್ ಭಟ್ ಮತ್ತು ಅರಿವಳಿಕೆ ತಜ್ಞ ಡಾ. ಕಾರ್ತಿಕ್ ಪ್ರಭು ಜೊತೆಗೂಡಿ ನಡೆಸಿದ ಸಂಕೀರ್ಣ ಶಸ್ತ್ರಚಿಕಿತ್ಸೆಯು ಯಾವುದೇ ತೊಡಕುಗಳಿಲ್ಲದೆ ಪೂರ್ಣಗೊಂಡಿತು. ಸದ್ಯ ಯುವತಿ ಆರೋಗ್ಯ ಸ್ಥಿರವಾಗಿದೆ.