ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನು ಅಧಿಕೃತವಾಗಿ ತಮಿಳುನಾಡು ಸರ್ಕಾರವು ಜಾರಿಗೊಳಿಸಿದೆ.
ತಮಿಳುನಾಡು ರಾಜ್ಯ ವಿಧಾನಸಭೆಯು 2020ರ ಜನವರಿಯಿಂದ 2023ರ ಏಪ್ರಿಲ್‌ವರೆಗೆ 12 ಮಸೂದೆಗಳನ್ನು ಅಂಗೀಕರಿಸಿತ್ತು. ಆದರೆ, ಗವರ್ನರ್ ಆರ್.ಎನ್.ರವಿ ಈ ಮಸೂದೆಗಳಿಗೆ ಸಮ್ಮತಿ ನೀಡದೆ ಮೂರು ವರ್ಷಗಳಿಗೂ ಹೆಚ್ಚು ಕಾಲ ವಿಳಂಬ ಮಾಡಿದರು.
ಬಳಿಕ ರಾಜ್ಯ ವಿಧಾನಸಭೆಯು 10 ಮಸೂದೆಗಳನ್ನು ವಿಶೇಷ ಅಧಿವೇಶನದಲ್ಲಿ ಮತ್ತೆ ಅಂಗೀಕರಿಸಿ ಗವರ್ನರ್‌ಗೆ ಕಳುಹಿಸಿತಾದರೂ, ಅವರು ಇವುಗಳನ್ನು ರಾಷ್ಟ್ರಪತಿಗಳಿಗೆ ರವಾನಿಸಿದರು. ರಾಷ್ಟ್ರಪತಿಗಳು ಒಂದು ಮಸೂದೆಗೆ ಸಮ್ಮತಿ ನೀಡಿದರು, ಏಳನ್ನು ತಿರಸ್ಕರಿಸಿದರು ಮತ್ತು ಎರಡನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ.
ಈ ವಿಳಂಬ ಮತ್ತು ಕ್ರಮಗಳನ್ನು ಪ್ರಶ್ನಿಸಿ, ತಮಿಳುನಾಡು ಸರ್ಕಾರವು 2023ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಜೆ.ಬಿ. ಪಾರ್ಡಿವಾಲಾ ಮತ್ತು ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠವು, ಗವರ್ನರ್ ಆರ್.ಎನ್. ರವಿ ಅವರ ಕ್ರಮವನ್ನು ಕಾನೂನುಬಾಹಿರ ಮತ್ತು ತಪ್ಪು ಎಂದು ಘೋಷಿಸಿತು.
ರಾಜ್ಯಪಾಲರಿಗೆ ಮಸೂದೆಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯುವ ‘ಪಾಕೆಟ್ ವೀಟೋ’ ಅಧಿಕಾರವಿಲ್ಲ. ಸಂವಿಧಾನದಲ್ಲಿ ಇಂತಹ ಆಯ್ಕೆಯನ್ನು ಒದಗಿಸಲಾಗಿಲ್ಲ ಎನ್ನುವ ಮೂಲಕ ರಾಜ್ಯಪಾಲರ ಕಾರ್ಯವಿಧಾನಕ್ಕೆ ಸ್ಪಷ್ಟ ಸಮಯ ಮಿತಿಗಳನ್ನು ವಿಧಿಸಿತು.
ಇದೀಗ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ತಮಿಳುನಾಡು ಸರ್ಕಾರವು ಈ 10 ಕಾಯ್ದೆಗಳನ್ನು ಸರ್ಕಾರಿ ಗೆಜೆಟ್‌ನಲ್ಲಿ ಅಧಿಸೂಚಿಸಿತು. ಇದರಿಂದಾಗಿ ಅವು ಕಾನೂನು ರೂಪವನ್ನು ಪಡೆದವು. ತಮಿಳುನಾಡು ವೆಟರಿನರಿ ಮತ್ತು ಪಶು ವಿಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ, ತಮಿಳುನಾಡು ಮೀನುಗಾರಿಕೆ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ, ಅಣ್ಣಾ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ ಸೇರಿ ಹತ್ತು ಕಾಯ್ದೆಗಳು ಕಾನೂನಾಗಿ ಜಾರಿಯಾದವು.