ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಿ ಪತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಯ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಾಲಹಳ್ಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ಲಕ್ಷ್ಮಿ (ಪತ್ನಿ) ಮತ್ತು ಶೃತಿ (ಅತ್ತೆ) ಗಂಭೀರವಾಗಿ ಗಾಯಗೊಂಡಿದ್ದು, ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
15 ವರ್ಷಗಳ ಹಿಂದೆ ಲಕ್ಷ್ಮಿ ಶ್ರೀಕಾಂತ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ಶ್ರೀಕಾಂತ್ ಹಾಗೂ ಅವರ ಕುಟುಂಬವು ಹಿಂದೂ ಧರ್ಮವನ್ನು ತ್ಯಜಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಬದಲಾವಣೆಯ ನಂತರ ಶ್ರೀಕಾಂತ್ ತಮ್ಮ ಪತ್ನಿ ಲಕ್ಷ್ಮಿಯನ್ನೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದರು.
ಇತ್ತೀಚಿಗೆ ಮತ್ತೊಮ್ಮೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ. ಸಂದರ್ಭದಲ್ಲಿ ಲಕ್ಷ್ಮಿಯ ತಾಯಿ ಶೃತಿ ಕೂಡ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಮತಾಂತರ ವಿಷಯದಲ್ಲಿ ಲಕ್ಷ್ಮಿ ತಮ್ಮ ನಿಲುವನ್ನು ಬದಲಿಸದಿದ್ದಾಗ, ಶ್ರೀಕಾಂತ್ ಕೋಪಗೊಂಡು ರಾಡ್‌ನಿಂದ ಲಕ್ಷ್ಮಿ ಮತ್ತು ಶೃತಿ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಘಟನೆ ಕುರಿತು ಲಕ್ಷ್ಮಿ ಕುಟುಂಬದಿಂದ ದೂರು ದಾಖಲಾಗಿದ್ದು, ಶ್ರೀರಂಗಪಟ್ಟಣ ಪೊಲೀಸರು ಶ್ರೀಕಾಂತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.