ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ, ಕೊಲೆ ಮಾಡಿದ್ದ ಬಿಹಾರ ಮೂಲದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಪ್ರಕರಣ ಸಂಬಂಭ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಕೊಪ್ಪಳ ಮೂಲದ ಕುಟುಂಬ ಮನೆಗೆಲಸ, ಪೇಂಟಿಂಗ್ ಕೆಲಸ ಮಾಡುವ ಸಲುವಾಗಿ ಹುಬ್ಬಳ್ಳಿಗೆ ಬಂದು ನೆಲೆಸಿದೆ. ಮೃತಪಟ್ಟಿರುವ ಬಾಲಕಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದಾರೆ. ಬಾಲಕಿ ತಾಯಿ ಮನೆಗೆಲಸಕ್ಕೆ ತೆರಳುವಾಗ ಜೊತೆಯಲ್ಲೇ ಕರೆದೊಯ್ದಿದ್ದರು. ತಾಯಿ ಮನೆಯೊಳಗೆ ತೆರಳಿದ್ದಾಗ ಮಗು ಹೊರಗಡೆ ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ಮಗುವನ್ನು ಆರೋಪಿ ರಿತೇಶ್ ಕುಮಾರ್ ಎತ್ತಿಕೊಂಡು ಹೋಗಿದ್ದಾನೆ ಎಂದು ತಿಳಿಸಿದರು.
ಸಿಸಿಟಿವಿ ದೃಶ್ಯಾವಗಳಿಗಳನ್ನ ಆಧರಿಸಿ ಆರೋಪಿ ಕೃತ್ಯವೆಸಗಿದ್ದು ಪತ್ತೆಯಾಗಿತ್ತು. ಆರೋಪಿ ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ವಾಸವಿದ್ದನು. ಈ ಮಾಹಿತಿ ಆಧರಿಸಿ, ಆರೋಪಿಯನ್ನು ಬಂಧಿಸಲು ತೆರಳಿದಾಗ ನಮ್ಮ ಸಿಬ್ಬಂದಿ ಮೇಲೆ ದಾಳಿ ಮಾಡಿದನು. ಈ ವೇಳೆ, ಪಿಎಸ್‌ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರು. ಆರೋಪಿ ಓಡಿ ಹೋಗಲು ಯತ್ನಿಸಿದಾಗ ಆತನ ಮೇಲೆ ಫೈರಿಂಗ್ ಮಾಡಿದರು. ಆರೋಪಿಯ ಬೆನ್ನಿಗೆ ಗುಂಡು ತಗುಲಿತ್ತು, ಆಸ್ಪತ್ರೆಗೆ ದಾಖಲಿಸಿದ್ವಿ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ರಿತೇಶ್ ಕುಮಾರ್ ಮೃತಪಟ್ಟಿದ್ದಾನೆ. ಇಂತಹ ಗಂಭೀರ ಪ್ರಕರಣದಲ್ಲಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಬಿಡಲ್ಲ ಎಂದು ಹೇಳಿದರು.
ಘಟನೆ ಹಿನ್ನೆಲೆ:
ಹುಬ್ಬಳ್ಳಿಯ ಅಧ್ಯಾಪಕ ನಗರದಲ್ಲಿ ನಡೆದ 5 ವರ್ಷದ ಬಾಲಕಿ ಮೇಲಿನ ರೇಪ್ & ಮರ್ಡರ್ ಜನರನ್ನು ಬೆಚ್ಚಿಬೀಳಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಸೈಕೋ ಎತ್ತೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾಳುಬಿದ್ದ ಕಟ್ಟಡವೊಂದಕ್ಕೆ ಕರೆದೊಯ್ದ ಬಿಹಾರ ಮೂಲದ ರಿತೇಶ್ ಕುಮಾರ್ ಎಂಬಾತ ಅತ್ಯಾಚಾರವೆಸಗಿದ್ದ. ಬಳಿಕ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ.
ಸಿಸಿಟಿವಿ ದೃಶ್ಯ ಆಧರಿಸಿ ಪೊಲಿಸರು ಮಿಂಚಿನ ಕಾರ್ಯಾಚರಣೆ ಕೈಗೊಂಡಿದ್ರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಬಿಹಾರ್ ಮೂಲದ ರಿತೇಶ್ ಕುಮಾರ್ ಎಂಬಾತ ಕೃತ್ಯ ಎಸಗಿದ್ದು ಬಯಲಿಗೆ ಬಂದಿತ್ತು. ಕೆಲವೇ ಕ್ಷಣಗಳಲ್ಲಿ ಪೊಲಿಸರು ಆತನನ್ನು ಹೆಡೆಮುರಿ ಕಟ್ಟಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ಆತ ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದಿದ್ದು ಗೊತ್ತಾಗಿತ್ತು. ಹೆಚ್ಚಿನ ತನಿಖೆಗೆಂದು ಪೊಲೀಸರು ಆತನನ್ನು ಸ್ಥಳಕ್ಕೆ ಕರೆದೊಯ್ದರು. ಈ ವೇಳೆ ಪೊಲೀಸರ ಮೇಲೆ ಆತ ಹಲ್ಲೆ ನಡೆಸಿದ್ದ.
ಆರೋಪಿ ಪೊಲಿಸರ ಮೇಲೆ ಹಲ್ಲೆ ನಡೆಸಿದಾಗ ಮೂವರು ಪೊಲೀಸರು ಗಾಯಗೊಂಡಿದ್ರು. ರಿತೇಶ್ ತಪ್ಪಿಸಿಕೊಂಡು ಓಡಲು ಹೊರಟಾಗ ಅಶೋಕ ನಗರ ಪಿಎಸ್‌ಐ ಅನ್ನಪೂರ್ಣ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗಲೂ ಆರೊಪಿ ಬಗ್ಗದಿದ್ದಾಗ ಪಿಎಸ್‌ಐ ನೇರವಾಗಿ ರಿತೇಶ್‌ಗೆ ಗುರಿಯಿಟ್ಟಿದ್ದಾರೆ. ಹುಬ್ಬಳ್ಳಿಯ ತಾರಿಹಾಳ ಅಂಡರ್‌ಪಾಸ್ ಬಳಿ ಕಾಮುಕ ನೆಲಕ್ಕುರುಳಿದ್ದಾನೆ.
ರೊಚ್ಚಿಗೆದ್ದ ಹುಬ್ಬಳ್ಳಿ ಜನ
ಇದಕ್ಕೂ ಮೊದಲು ಬಾಲಕಿ ಹತ್ಯೆಗೈದ ಸೈಕೋಪಾತ್ ವಿರುದ್ಧ ಹುಬ್ಬಳ್ಳಿ ಜನ ರೊಚ್ಚಿಗೆದ್ದಿದ್ದು. ಅಶೋಕ ನಗರ ಠಾಣೆ ಬಳಿ ಸಾವಿರಾರು ಜನ ಜಮಾಯಿಸಿದ್ರು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಪೊಲೀಸ್ ಠಾಣೆ ಬಳಿಯೇ ಧರಣಿ ನಡೆಸಿದ್ರು. ಪ್ರತಿಭಟನೆ ಹೆಚ್ಚಾಗ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ,ಮೃತ ಬಾಲಕಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.