ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೋವಿ ನಿಗಮ ಹಗರಣ ಸಂಬಂಧ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಇದೀಗ ಒಟ್ಟು 2,300 ಪುಟಗಳ ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದ್ದಾರೆ.
ಐಪಿಎಸ್ ಅಧಿಕಾರಿಗಳಾದ ವಿನಾಯಕ್ ವರ್ಮಾ, ಅಕ್ಷಯ್ ಮಚೀಂದ್ರ, ನಿಶಾ ಜೇಮ್ಸ್ ನೇತೃತ್ವದ ವಿಶೇಷ ತನಿಖಾ ತಂಡದಿಂದ ವರದಿ ಸಲ್ಲಿಕೆ ಮಾಡಲಾಗಿದೆ. ಸಾಕ್ಷಿದಾರರ ಹೇಳಿಕೆ, ವಿಡಿಯೋ ಸಾಕ್ಷ್ಯಗಳ ಸಮೇತ ವರದಿ ನೀಡಿದ್ದು, ಜೀವಾಗೆ ಡಿವೈಎಸ್‌ಪಿ ಕನಕಲಕ್ಷ್ಮೀ ಕಿರುಕುಳ, ಹಿಂಸೆ ನೀಡಿರೋದು ಸಾಬೀತಾಗಿದೆ.
ಡಿಸೆಂಬರ್ನಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ಸದ್ಯ ಹೈಕೋರ್ಟ್ ಸೂಚನೆಯಂತೆ ಎಸ್ಐಟಿಯಿಂದ ವರದಿ ಸಲ್ಲಿಕೆ ಮಾಡಿದೆ.
ನ.22ರಂದು ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ವಕೀಲೆ ಜೀವಾ ಆತ್ಮಹತ್ಯೆ ನಡೆದಿತ್ತು. ಡಿವೈಎಸ್‌ಪಿ ಕನಕಲಕ್ಷ್ಮೀ ಕಿರುಕುಳದ ಬಗ್ಗೆ 13 ಪುಟಗಳ ಡೆತ್ನೋಟ್ನಲ್ಲಿ ಜೀವಾ ಬರೆದಿದ್ದರು. ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತುದ್ದಂತೆ ಬನಶಂಕರಿ ಠಾಣೆಯಿಂದ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಗಿತ್ತು. ಬಳಿಕ ಹೈಕೋರ್ಟ್ ಸಿಬಿಐ ಅಧಿಕಾರಿಗಳನ್ನೂ ಒಳಗೊಂಡಂತೆ ಎಸ್ಐಟಿ ರಚಿಸಿತ್ತು. ಮಾ.11ರಂದು ಎಸ್ಐಟಿ ಕನಕಲಕ್ಷ್ಮೀ ಅವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಇದೀಗ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಕೆ ಮಾಡಿದೆ.
ಜೀವಾ ವಿಚಾರಣೆ ವೇಳೆ ಚಿತ್ರೀಕರಿಸಲಾಗಿದ್ದ ಕೆಲವು ವಿಡಿಯೋ ಡಿಲೀಟ್ ಆಗಿದ್ದವು. ಜೀವಾರನ್ನು ವಿವಸ್ತ್ರಗೊಳಿಸಿರುವುದು, ಇತರೆ ಕೆಲ ವಿಡಿಯೋಗಳು ಇರಲಿಲ್ಲ. ಎಫ್ಎಸ್ಎಲ್ ಮೂಲಕ ಮರು ಸಂಗ್ರಹಿಸಿದಾಗ ಆ ವಿಡಿಯೋಗಳು ಪತ್ತೆಯಾದವು. ಡೆತ್ನೋಟ್ನಲ್ಲಿ ಜೀವಾ ಮಾಡಿದ್ದ ಬಹುತೇಕ ಆರೋಪಗಳು ಸಾಬೀತಾಗಿದೆ.