ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ತಿದ್ದುಪಡಿ ಕಾಯ್ದೆ 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಇತರರು ಸಲ್ಲಿಸಿರುವ ಸುಮಾರು 10 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 10ಕ್ಕೆ ನಿಗದಿಪಡಿಸಿದೆ ಎಂದು ಮುಖ್ಯ ನ್ಯಾಯಮೂರ್ತೀ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ಹರಿ ಶಂಕರ್ ಜೈನ್ ಮತ್ತು ಮಣಿ ಮುಂಜಾಲ್ ಎಂಬುವವರ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ಸಲ್ಲಿಸಿರುವ ಹೊಸ ಅರ್ಜಿಯು ಭಾರತ ಸರ್ಕಾರ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ವಕ್ಫ್ ಕೌನ್ಸಿಲ್ ವಿರುದ್ಧವಾಗಿದೆ.
ಈ ಎಲ್ಲಾಅರ್ಜಿಗಳು ಮುಖ್ಯ ನ್ಯಾಯಮೂರ್ತಿ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿವೆ.