ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಮುಸ್ತಫಾಬಾದ್ನ ಶಕ್ತಿ ವಿಹಾರ್ ಪ್ರದೇಶದಲ್ಲಿ ಇಂದು ಮುಂಜಾನೆ ನಾಲ್ಕು ಅಂತಸ್ತಿನ ಕಟ್ಟಡವೊಂದು ದಿಢೀರ್ ಕುಸಿದು ಬಿದ್ದಿದ್ದು, ಇಲ್ಲಿಯವರೆಗೆ ಸುಮಾರು 11 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ದುರಂತದಲ್ಲಿ ಹಲವರು ಇನ್ನೂ ಭಗ್ನಾವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ಈ ಭೀಕರ ಘಟನೆಯಲ್ಲಿ ಸಾವನ್ನಪ್ಪಿದ 11 ಜನರಲ್ಲಿ ಎಂಟು ಮಂದಿ ಒಂದೇ ಕುಟುಂಬಕ್ಕೆ ಸೇರಿದವರು. ಮೃತರಲ್ಲಿ ಮೂವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ.
ಇನ್ನು ಕಟ್ಟಡ ಕುಸಿದು ಬಿದ್ದಾಗಿನಿಂದ ಕ್ರೇನ್ಗಳು ಮತ್ತು ಥರ್ಮಲ್ ಕ್ಯಾಮೆರಾಗಳನ್ನು ಬಳಸಿ, ದೆಹಲಿ ಅಗ್ನಿಶಾಮಕ ಸೇವೆಗಳು, ರಾಷ್ಟ್ರೀಯ ವಿಪತ್ತು ಪಡೆ (ಎನ್ಡಿಆರ್ಎಫ್), ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮತ್ತು ಸ್ಥಳೀಯ ಸ್ವಯಂಸೇವಕರ ರಕ್ಷಣಾ ತಂಡಗಳು ಬಿಡುವಿಲ್ಲದೆ ಕೆಲಸ ಮಾಡುತ್ತಿವೆ.