ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಷ್ಟು ಗಂಟೆಗೇ ಏಳಬೇಕು, ಇಷ್ಟು ಗಂಟೆಗೇ ಊಟ ಮಾಡಬೇಕು, ಇಷ್ಟು ಗಂಟೆಗೇ ಮಲಗಬೇಕು, ಹೀಗೆ ಪ್ರತಿಯೊಂದಕ್ಕು ಶಿಸ್ತಿನಿ ನಿಯಮ ಹಾಕುತ್ತಿದ್ದ ತಂದೆಯನ್ನು ಮಗನೇ ಕೊಲೆ ಮಾಡಿದ್ದಾನೆ.
ತಂದೆಯ ಅತಿಯಾದ ಶಿಸ್ತಿನ ಪಾಠಕ್ಕೆ ಬೇಸತ್ತ ಪುತ್ರನೊಬ್ಬ ತಾಯಿ ಜತೆ ಸೇರಿ ನಿವೃತ್ತ ಸೈನಿಕನನ್ನು ಹತ್ಯೆಗೈದಿರುವ ಘಟನೆ ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿವೇಕನಗರ ನಿವಾಸಿ ಬೋಲು ಅರಬ್ (47) ಕೊಲೆಯಾದ ಮಾಜಿ ಸೈನಿಕ. ಭಾನುವಾರ ಬೆಳಗ್ಗೆ ಸುಮಾರು 1.30ಕ್ಕೆ ದುರ್ಘಟನೆ ನಡೆದಿದೆ. ಈ ಸಂಬಂಧ ಮೃತನ ಪುತ್ರ ಸಮೀರ್(19) ಮತ್ತು ಪತ್ನಿ ತಬಸ್ಸುಮ್ (36) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮಹಾರಾಷ್ಟ್ರ ಮೂಲದ ಬೋಲು ಅರಬ್ ನಿವೃತ್ತ ಸೈನಿಕರಾಗಿದ್ದು, 2003ರಲ್ಲಿ ತಬಸ್ಸುಮ್‌ರನ್ನು ಮದುವೆಯಾಗಿ ಪುತ್ರನ ಜತೆ ವಿವೇಕನಗರದಲ್ಲಿ ವಾಸವಾಗಿದ್ದರು. ಪುತ್ರ ಸಮೀರ್ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಬೋಲು ಅರಬ್ ಶಿಸ್ತಿನ ವ್ಯಕ್ತಿಯಾಗಿದ್ದರು. ಪತ್ನಿ ಮತ್ತು ಪುತ್ರನಿಗೂ ಶಿಸ್ತಿನಿಂದ ಇರುವಂತೆ ಎಚ್ಚರಿಕೆ ನೀಡುತ್ತಿದ್ದರು.
ವಿನಾಕಾರಣ ಮನೆಯಿಂದ ಹೊರಗೆ ಹೋಗುವಂತಿಲ್ಲ. ಇಂತಿಷ್ಟೇ ಊಟ ಮಾಡಬೇಕೆಂದು ನಿಯಮ ಮಾಡಿದ್ದರು. ಈ ಅತೀಯಾದ ಶಿಸ್ತಿನಿಂದ ಪುತ್ರ ಮತ್ತು ಪತ್ನಿ ಬೇಸತ್ತಿದ್ದರು. ಹೀಗಾಗಿ ತಾಯಿ-ಮಗ ಸೇರಿ ಬೋಲು ಅರಬ್‌ನನ್ನು ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.