ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ರಾಜಕಾರಣಿಗಳು ಐದು ವರ್ಷದ ನಂತರ ಮನೆಗೆ ಹೋಗುತ್ತೇವೆ. ಸರ್ಕಾರಿ ನೌಕರರು 60 ವರ್ಷವಾಗುವವರೆಗೂ ಜನರ ಸೇವೆ ಮಾಡಬಹುದು. ಎಲ್ಲರಿಗೂ ಅಂತಹ ಅವಕಾಶ ಸಿಗುವುದಿಲ್ಲ. ನಿಮಗೆ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೆಲಸ ಹೇಗೆ ಆಗುತ್ತದೆ ಎಂಬ ಎಲ್ಲ ವಿವರ ಸರ್ಕಾರಿ ನೌಕರನಿಗೆ ಇರುತ್ತದೆ. ಆದರೂ ಆ ದಾಖಲೆ, ಈ ದಾಖಲೆ ತೆಗೆದುಕೊಂಡು ಬನ್ನಿ ಎಂದು ಸಾರ್ವಜನಿಕರನ್ನು ಅಲೆಸುತ್ತಾರೆ. ಸಾರ್ವಜನಿಕರು ತಮಗೆ ಸಲಾಂ ಹೊಡೆಯಬೇಕು, ಕಡಲೆ ಕಾಯಿ, ಹಣ್ಣು, ಕೋಳಿ ತಂದುಕೊಡಬೇಕು ಎನ್ನುವ ಧೋರಣೆ ಇತ್ತು. ನೀವ್ಯಾರೂ ಈ ರೀತಿ ಮಾಡಬಾರದು ಎಂದರು.
ಶಾಸಕಾಂಗ ತೀರ್ಮಾನ ಮಾಡಿದ್ದನ್ನು, ಜಾರಿಗೆ ತರುವವರೇ ನೀವು ಅಂದರೆ (ಸರ್ಕಾರಿ ನೌಕರರು) ಕಾರ್ಯಾಂಗ. ನೀವು, ನಾವು ತಪ್ಪು ಮಾಡಿದರೆ ನಮ್ಮನ್ನು ತಿದ್ದುವುದು ನ್ಯಾಯಾಂಗ. ನಾವು ತಪ್ಪು ಮಾಡಿದರೆ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ನಮ್ಮ ತಪ್ಪಿನ ಬಗ್ಗೆ ಬರೆದಾಗ, ಕೋಪಿಸಿಕೊಳ್ಳಬಾರದು. ಬದಲಿಗೆ ತಪ್ಪು ತಿದ್ದಿಕೊಳ್ಳಬೇಕು ಎಂದರು.