ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖ್ಯಾತ ಉದ್ಯಮಿ, ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ತೀವ್ರವಾಗಿ ಖಂಡಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಗಾಯಗೊಂಡವರಿಗೆ ರಿಲಯನ್ಸ್ ಫೌಂಡೇಶನ್ ವತಿಯಿಂದ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ.
2025 ರ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ. ರಿಲಯನ್ಸ್ ಕುಟುಂಬದ ಎಲ್ಲರೂ ನಿಮ್ಮ ಜೊತೆ ಇದ್ದಾರೆ. ಮೃತರ ಕುಟುಂಬಗಳಿಗೆ ನಾವು ನಮ್ಮ ಸಂತಾಪ ಸೂಚಿಸುತ್ತೇವೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಭಯೋತ್ಪಾದನೆ ಮಾನವೀಯತೆಯ ಶತ್ರು. ಅದನ್ನು ಯಾರೂ ಯಾವುದೇ ರೀತಿಯಲ್ಲಿ ಬೆಂಬಲಿಸಬಾರದು. ಭಯೋತ್ಪಾದನೆಯ ಬೆದರಿಕೆಯ ವಿರುದ್ಧದ ನಿರ್ಣಾಯಕ ಯುದ್ಧದಲ್ಲಿ ನಾವು ನಮ್ಮ ಗೌರವಾನ್ವಿತ ಪ್ರಧಾನಿ, ಭಾರತ ಸರ್ಕಾರ ಮತ್ತು ಇಡೀ ದೇಶದೊಂದಿಗೆ ಸಂಪೂರ್ಣವಾಗಿ ನಿಲ್ಲುತ್ತೇವೆ ಎಂದು ಮುಕೇಶ್ ಅಂಬಾನಿ ಭರವಸೆಯ ಮಾತುಗಳನ್ನಾಡಿದ್ದಾರೆ.