ಹೊಸದಿಗಂತ ಬೀದರ್:
ನಗರದ ಆದರ್ಶ ಕಾಲೋನಿಯ ಮನೆಯೊಂದಕ್ಕೆ ಬೆಳಗ್ಗಿನ ಜಾವ ನುಗ್ಗಿದ ದರೋಡೆಕೋರರ ತಂಡ, ಮನೆಯಲ್ಲಿದ್ದವರಿಗೆ ರಿವಾಲ್ವರ್, ತಲ್ವಾರ್ ತೋರಿಸಿ, ಜೀವ ಬೆದರಿಕೆಯೊಡ್ಡಿ ಸುಮಾರು 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದೆ.
ಇಲ್ಲಿನ ಭೂ ದಾಖಲೆ ಇಲಾಖೆಯಲ್ಲಿ ಅಧೀಕ್ಷಕಿಯಾಗಿರುವ ಜ್ಯೋತಿ ಎಂಬುವವರ ಮನೆಗೆ ನುಗ್ಗಿ ಈ ದರೋಡೆ ಮಾಡಲಾಗಿದೆ. ಬೆಳಗ್ಗಿನ ಜಾವ 3.30ರಿಂದ 4ರ ಮಧ್ಯೆ ಈ ಘಟನೆ ನಡೆದಿದೆ. ಸ್ಕಾರ್ಪಿಯೋ ಜೀಪ್ ನಲ್ಲಿ ಬಂದಿದ್ದರೆನ್ನಲಾದ ಆರೇಳು ಮುಸುಕುಧಾರಿಗಳು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ಡಕಾಯಿತರ ಗ್ಯಾಂಗ್ ಮನೆಯ ಮುಖ್ಯ ಬಾಗಿಲು ಮುರಿದು ಒಳಗೆ ನುಗ್ಗಿದೆ. ಒಳಗಿದ್ದ ಜ್ಯೋತಿ, ಅವರ ತಾಯಿ ಪಾರ್ವತಿ ಹಾಗೂ ಪುತ್ರ ಸಂಕಲ್ಪನಿಗೆ ರಿವಾಲ್ವರ್ ತೋರಿಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಬಳಿಕ ಅಲಮಾರದ ಕೀಲಿಕೈ ಪಡೆದು ಸುಮಾರು 60 ತೊಲಾ ಚಿನ್ನಾಭರಣ ದೋಚಿದ್ದಾರೆ. ಹೋಗುವಾಗ ಹೊರಗಿನಿಂದ ಬೀಗ ಹಾಕಿಕೊಂಡು ಕಾಲ್ಕಿತ್ತಿದ್ದಾರೆ. ಇದೇ ಮನೆಯಲ್ಲಿ ಪಕ್ಕದ ಒಂದು ಕೋಣೆಯಲ್ಲಿ ಬಾಡಿಗೆಯಿಂದ ಇಬ್ಬರು ವಿದ್ಯಾರ್ಥಿಗಳಿದ್ದರು. ಅವರಿಗೂ ಬೆದರಿಸಿ ರೂಮಿನಲ್ಲಿ ಹಾಕಿ ಹೊರಗಿನಿಂದ ಕೊಂಡಿ ಹಾಕಿ ಪರಾರಿಯಾಗಿದ್ದಾರೆ.
ಇವರೆಲ್ಲ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರು. ಎಲ್ಲರೂ 25-30 ವರ್ಷದವರಿದ್ದರು. ಮನೆಯಲ್ಲಿನ ಎಲ್ಲ ಚಿನ್ನಾಭರಣ ತೋರಿಸಿ ಕೊಡಿ. ಇಲ್ಲದಿದ್ದರೆ ಎಲ್ಲರಿಗೂ ಶೂಟ್ ಮಾಡುವುದಾಗಿ ಬೆದರಿಸಿ, ಚಿನ್ನ ದೋಚಿ ತೆರಳಿದ್ದಾರೆ.
ಕಳೆದ ಜನವರಿ 16ರಂದು ಇಲ್ಲಿಯ ಎಸ್ ಬಿಐ ಎಟಿಎಂ ದರೋಡೆಯಲ್ಲಿ 83 ಲಕ್ಷ ರೂ. ಲೂಟಿ ಮಾಡಿದ್ದಲ್ಲದೆ ಗುಂಡು ಹಾರಿಸಿ ಒಬ್ಬನ ಹತ್ಯೆಗೈದು, ಇನ್ನೊಬ್ಬನಿಗೆ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಇನ್ನೂ ಜನಮಾನಸದಲ್ಲಿ ಭೀತಿಗೆ ಕಾರಣವಾಗಿರುವ ನಡುವೆಯೂ ಮತ್ತೊಂದು ದೊಡ್ಡ ರಾಬರಿ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ನಿರ್ಮಿಸಿದೆ. ಎಟಿಎಂ ರಾಬರಿ ಪ್ರಕರಣ ಭೇದಿಸುವಲ್ಲಿ ಇನ್ನೂ ವಿಫಲವಾಗಿರುವ ಜಿಲ್ಲಾ ಪೊಲೀಸರಿಗೆ ಈಗ ಮತ್ತೊಂದು ರಾಬರಿ ಘಟನೆ ತಲೆನೋವು ತಂದಿಟ್ಟಿದೆ.
ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದುಷ್ಟರು, ಸಮಾಜಘಾತುಕರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂಬ ವ್ಯಾಪಕ ಆರೋಪಗಳು ಕೇಳಿಬರುತ್ತಿರುವಾಗಲೇ ಬಿಂದಾಸ್ ಮನೆಗೆ ನುಗ್ಗಿ ಗನ್ ತೋರಿಸಿ ರಾಬರಿ ಮಾಡಿರುವ ಘಟನೆ ಸಹಜವೇ ಪೊಲೀಸ್ ಇಲಾಖೆ ಕಾರ್ಯವೈಖರಿ ಮೇಲೆ ಪ್ರಶ್ನೆ ಚಿಹ್ನೆ ಮೂಡಿಸಿದೆ. ನಿರಂತರ ಅಹಿತಕರ ಘಟನೆ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿರುಮ್ಮಳವಾಗಿದ್ದು, ಪೊಲೀಸ್ ಅಧಿಕಾರಿಗಳ ಸಮರ್ಥನೆಯಲ್ಲಿ ತೊಡಗಿರುವುದು ಸಚಿವರ ಬಗ್ಗೆ ನಕಾರಾತ್ಮಕ ಚರ್ಚೆಗೆ ಗ್ರಾಸವಾಗಿದೆ. ಪಹಲ್ಗಾಮ್ ಘಟನೆ ನೈತಿಕ ಹೊಣೆ ಹೊತ್ತು ಅಮಿತ್ ಶಾ ರಾಜೀನಾಮೆಗೆ ಖಂಡ್ರೆ ಒತ್ತಾಯಿಸಿದ್ದಾರೆ. ಖಂಡ್ರೆ ಅವರಿಗೆ ನೈತಿಕತೆ ಇದ್ದರೆ ಹಾಡಹಗಲೇ ಬೀದರ್ ಶೂಟೌಟ್, ಎಟಿಎಂ ರಾಬರಿ, ಇದೀಗ ಗನ್ ತೋರಿಸಿ ಭಾರಿ ದರೋಡೆ ಘಟನೆ ಸಂಬಂಧ ರಾಜೀನಾಮೆ ನೀಡಲಿ ಎಂಬ ಒತ್ತಾಯ ಕೇಳಿಬರುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಸಹ ಈ ಪ್ರಶ್ನೆ ಮಾಡುತ್ತಿದ್ದಾರೆ.