ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಪೊನ್ನಿಯಿನ್ ಸೆಲ್ವನ್’ ಮತ್ತು ‘ಲಿಯೋ’ ದಂತಹ ಇತ್ತೀಚಿನ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಮಿಂಚಿದ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ತಮ್ಮ ಐಷಾರಾಮಿ ಜೀವನಶೈಲಿ ಮತ್ತು ಗಳಿಕೆಯಿಂದ ಈಗ ಸುದ್ದಿಯಲ್ಲಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಿಂದ ತಮ್ಮ ವೃತ್ತಿಜೀವನ ಆರಂಭಿಸಿದ ತ್ರಿಷಾ, ‘ಜೋಡಿ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ನಂತರ, ‘ಮೌನಂ ಪೇಸಿಯದೇ’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದರು. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ‘ಪವರ್’ ಚಿತ್ರದಲ್ಲಿಯೂ ನಟಿಸಿದ್ದಾರೆ. ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.
ವರದಿಗಳ ಪ್ರಕಾರ, ತ್ರಿಷಾ ಕೃಷ್ಣನ್ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯ ಸುಮಾರು ರೂ. 85 ಕೋಟಿಯಿಂದ ರೂ. 90 ಕೋಟಿಗಳ ನಡುವೆ ಇದೆ ಎಂದು ಅಂದಾಜಿಸಲಾಗಿದೆ. ಕೆಲವು ವರದಿಗಳು ಈ ಮೊತ್ತ ರೂ.100 ಕೋಟಿಗೂ ಅಧಿಕ ಎಂದು ಹೇಳುತ್ತವೆ.
ಪ್ರತಿ ಚಿತ್ರಕ್ಕೆ ಸುಮಾರು ರೂ. 3 ಕೋಟಿಯಿಂದ ರೂ. 5 ಕೋಟಿ ವರೆಗೆ ಸಂಭಾವನೆ ಪಡೆಯುತ್ತಿರುವ ತ್ರಿಷಾ, ಚಲನಚಿತ್ರಗಳ ಜೊತೆಗೆ, ಹಲವಾರು ಪ್ರತಿಷ್ಠಿತ ಬ್ರಾಂಡ್‌ಗಳ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಅವರ ಕಾರು ಸಂಗ್ರಹದಲ್ಲಿ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್, ಬಿಎಂಡಬ್ಲ್ಯು 5 ಸೀರೀಸ್ ಮತ್ತು ರೇಂಜ್ ರೋವರ್ ಎವೋಕ್ ನಂತಹ ಅತ್ಯಾಧುನಿಕ ಮತ್ತು ದುಬಾರಿ ಕಾರುಗಳಿವೆ.