ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಮೊದಲ ಬಾರಿಗೆ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಸೇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ.
ಕಳೆದ ವಾರ ಕೇಂದ್ರ ಸಚಿವ ಸಂಪುಟದ ಯಾವುದೇ ಸಭೆ ನಡೆದಿರಲಿಲ್ಲ. ಏಪ್ರಿಲ್ 23 ರಂದು ಭದ್ರತೆ ಕುರಿತ ಸಂಪುಟ ಸಮಿತಿ ಸಭೆ ನಡೆದಿತ್ತು. ಭಯೋತ್ಪಾದಕ ದಾಳಿಯನ್ನು ಖಂಡಿಸಲಾಗಿತ್ತು.
ಭದ್ರತಾ ಕುರಿತ ಸಂಪುಟ ಸಮಿತಿ ಸಭೆ ನಂತರ ಭಾರತ ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿಮೆ ಮಾಡುವುದು ಸೇರಿದಂತೆ ಇನ್ನಿತರ ಹಲವು ಕ್ರಮಗಳನ್ನು ಘೋಷಿಸಿತ್ತು. ಆರು ದಶಕಗಳ ಹಳೆಯದಾದ ಸಿಂಧೂ ನದಿ ನೀರು ಒಪ್ಪಂದ ರದ್ದು, ಕೂಡಲೇ ಅಟ್ಟಾರಿ ಗಡಿ ಬಂದ್ ಕ್ರಮ ಕೈಗೊಳ್ಳಲಾಗಿತ್ತು.