ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಟ್ಟಾರಿ- ವಾಘಾ ಗಡಿಯನ್ನು ಮುಚ್ಚುವುದರಿಂದ ಅಫ್ಘಾನಿಸ್ತಾನದಿಂದ ಭಾರತಕ್ಕೆ ಪೂರೈಕೆಯಾಗುತ್ತಿದ್ದ ‘ಡ್ರೈಫ್ರೂಟ್ಸ್’ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.
ಇದರಿಂದಾಗಿ ಡ್ರೈಫ್ರೂಟ್ಸ್’ ದೇಶೀಯ ಬೆಲೆಗಳು ಶೇ. 10 ರಿಂದ 25 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ವರ್ಷಗಳ ಯುದ್ಧ ಮತ್ತು ಆಂತರಿಕ ಕಲಹಗಳ ಹೊರತಾಗಿಯೂ ಡ್ರೈಫ್ರೂಟ್ಸ್’ ಪೂರೈಕೆಗೆ ಅಫ್ಘಾನಿಸ್ತಾನ ಭಾರತಕ್ಕೆ ಅತಿದೊಡ್ಡ ಮೂಲವಾಗಿದೆ.
ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚಿದ ನಂತರ ಏಪ್ರಿಲ್ 22 ರಿಂದ ಅಫ್ಘಾನಿಸ್ತಾನದ ಕಂದಹಾರ್‌ನಿಂದ ಅಟ್ಟಾರಿಗೆ ಡ್ರೈಫ್ರೂಟ್ಸ್ ಸಾಗಿಸುವ ಯಾವುದೇ ಟ್ರಕ್‌ಗಳು ಬರುತ್ತಿಲ್ಲ ಎಂದು ದಿನಸಿ ಮತ್ತು ಒಣ ಹಣ್ಣುಗಳ ವಾಣಿಜ್ಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಅನಿಲ್ ಮೆಹ್ರಾ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ಕಡೆಯ ವಾಘಾ ಗಡಿಯಲ್ಲಿ ಸುಮಾರು 50 ಟ್ರಕ್‌ಗಳು ನಿಂತಿವೆ. ಅಫ್ಘಾನಿಸ್ತಾನದಿಂದ ಭಾರತದ ಅಟ್ಟಾರಿಗೆ ಬರುತ್ತಿದ್ದ ಸುಮಾರು 100 ಟ್ರಕ್ ಗಳು 35 ರಿಂದ 40 ಟನ್ ಡ್ರೈಫ್ರೂಟ್ಸ್ ತಂದು ಮರಳುತ್ತಿದ್ದವು. ಮುಖ್ಯವಾಗಿ ಅಫ್ಘಾನಿಸ್ತಾನದ ಕಂದಹಾರ್ ನಿಂದ ಡ್ರೈಫ್ರೂಟ್ಸ್ ಬಂದರೆ, ಕಾಬೂಲ್‌ನಿಂದ ಕೆಲವು ವಸ್ತುಗಳು ಬರುತ್ತವೆ ಎಂದು ಅವರು ಹೇಳಿದರು.