ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿಯಿಂದ ಎಚ್ಚೆತ್ತ ಮಹಾರಾಷ್ಟ್ರ ಸರ್ಕಾರ, ‘ರಾಜ್ಯದಲ್ಲಿ ಪ್ರವಾಸೋದ್ಯಮ ಭದ್ರತಾ ಪಡೆ’ಯನ್ನು ಪ್ರಾರಂಭಿಸಲು ಮುಂದಾಗಿದೆ.
ಈ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವ ಶಂಭುರಾಜ್ ದೇಸಾಯಿ ಮಾತನಾಡಿ, ಮಹಾರಾಷ್ಟ್ರ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ಹೊಸ ಪಡೆಯನ್ನು ಸರ್ಕಾರ ಆರಂಭಿಸಿದೆ. ಪ್ರವಾಸಿಗರಿಗೆ ಮಾರ್ಗದರ್ಶನ ಮತ್ತು ರಕ್ಷಣೆ ನೀಡಲು ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುವುದುಎಂದು ಹೇಳಿದರು.
ಮೇ 1 ರಿಂದ 4 ರವರೆಗೆ ಸತಾರಾದಲ್ಲಿ ನಡೆಯಲಿರುವ ಮಹಾಬಲೇಶ್ವರ ಉತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರ ಪ್ರವಾಸೋದ್ಯಮ ಭದ್ರತಾ ಪಡೆಯನ್ನು ಪ್ರಾಯೋಗಿಕವಾಗಿ ನಿಯೋಜಿಸಲಾಗುವುದು. ರಾಜ್ಯಕ್ಕೆ ಬರುವ ಪ್ರವಾಸಿಗರ ಮನಸ್ಸಿನಲ್ಲಿ ಭದ್ರತಾ ಪ್ರಜ್ಞೆ ಮೂಡಿಸಲು ಮತ್ತು ರಾಜ್ಯದ ಸಂಸ್ಕೃತಿ, ಇತಿಹಾಸ, ಪ್ರವಾಸಿ ಸ್ಥಳಗಳು, ಕಾನೂನುಗಳು, ನಿಯಮಗಳು ಮತ್ತು ಪ್ರವಾಸೋದ್ಯಮದ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಲು, ಪ್ರವಾಸೋದ್ಯಮ ಭದ್ರತಾ ಪಡೆಯನ್ನು ನೇಮಿಸಲಾಗುವುದು ಎಂದರು.
ಮಹಾರಾಷ್ಟ್ರ ಸರ್ಕಾರ ಪ್ರವಾಸೋದ್ಯಮದಿಂದ ಈ ವರ್ಷ 1 ಲಕ್ಷ ಕೋಟಿ ರೂ. ಖಾಸಗಿ ಬಂಡವಾಳವನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. 18 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಮಹಾರಾಷ್ಟ್ರ ಸರ್ಕಾರ ಹೊಂದಿದೆ. ಸರ್ಕಾರವು ಪಡೆಗೆ ಅಗತ್ಯ ವಾಹನಗಳನ್ನು ಒದಗಿಸಲಿದೆ. ಪಡೆಯ ಮೇಲ್ವಿಚಾರಣೆ ಮಾಡಲು ಹಿರಿಯ ಅಧಿಕಾರಿಗಳನ್ನು ನೇಮಿಸಲು ಸರ್ಕಾರ ಸೂಚಿಸಿದೆ.