ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಿಂಹಾಚಲಂನಲ್ಲಿರುವ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಇಂದು ಮುಂಜಾನೆ ಸರತಿ ಸಾಲಿನ ಪಕ್ಕದ ಗೋಡೆ ಕುಸಿದು ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ವಾರ್ಷಿಕ ಚಂದನೋತ್ಸವ ಹಬ್ಬದ ಸಂದರ್ಭದಲ್ಲಿ ಭಕ್ತರು ದೇವರ ದರುಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಬೆಳಗಿನ ಜಾವ 2:30 ರ ಸುಮಾರಿಗೆ ಈ ಘಟನೆ ನಡೆದಿದೆ.
ಈ ಘಟನೆ ನಂತರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಸ್ಥಳೀಯ ಅಧಿಕಾರಿಗಳೊಂದಿಗೆ, ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ. ಘಟನೆ ನಡೆದ ಕೂಡಲೇ ರಾಜ್ಯ ಗೃಹ ಸಚಿವೆ ವಂಗಲಪುಡಿ ಅನಿತಾ ಸ್ಥಳಕ್ಕೆ ಧಾವಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಹಿಂದಿನ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹೊಸದಾಗಿ ನಿರ್ಮಿಸಲಾದ ದೇವಾಲಯದ ಗೋಡೆಗೆ ನೀರು ತಾಕಿದ್ದು, ಭಕ್ತರ ಒತ್ತಡದಿಂದಾಗಿ ಗೋಡೆ ಕುಸಿದಿದೆ ಎಂದು ಹೇಳಲಾಗಿದೆ.