ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಗ್ರರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಭಾರತ ಬದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಅಂಗೋಲಾ ಅಧ್ಯಕ್ಷ ಜೊವೊ ಲೊರೆಂಕೊ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ-ಪಾಕಿಸ್ತಾನ ರಾಷ್ಟ್ರಗಳು ಉದ್ವಿಗ್ನತೆಯ ನಡುವೆ ಪರಸ್ಪರರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ನಡುವೆ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ.
ರಾಷ್ಟ್ರದ ಶಾಂತಿ ಮತ್ತು ಪ್ರಗತಿಗೆ ಭಯೋತ್ಪಾದನೆ ದೊಡ್ಡ ಕಂಟಕ. ಇದನ್ನು ಎದುರಿಸಲು ನಮ್ಮ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳು ಸಂಪೂರ್ಣ ಸಿದ್ಧತೆಯಲ್ಲಿವೆ. ಭಯೋತ್ಪಾದಕರಿಗೆ ಮತ್ತು ಅವರಿಗೆ ಬೆಂಬಲ ನೀಡುವವರಿಗೆ ಕಾನೂನಿನ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.