ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ಕುರಿತಾಗಿ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ನೀಡಿರುವ ಹೇಳಿಕೆಯನ್ನು ಟ್ರೋಲ್ ಮಾಡುತ್ತಿರುವವರ ಮೇಲೆ ಮಹಿಳಾ ಆಯೋಗ ಕಿಡಿಕಾರಿದೆ.
ಪಹಲ್ಗಾಮ್ ದಾಳಿಯಲ್ಲಿ ವಿನಯ್ ಸಾವನ್ನಪ್ಪಿದ್ದರು. ಅದಾದ ಬಳಿಕ ಅವರ ಪತ್ನಿ ಹಿಮಾಂಶಿ ನರ್ವಾಲ್ ಭಾವುಕರಾಗಿ ವಿಡಿಯೋ ಮಾಡಿದ್ದರು. ವಿನಯ್ ಎಲ್ಲಿದ್ದಾರೋ ಅಲ್ಲಿ ಶಾಂತಿಯಿಂದ ಇರಲಿ ಎಂದು ಇಡೀ ದೇಶದ ಜನ ಪ್ರಾರ್ಥನೆ ಮಾಡಬೇಕು. ಅಷ್ಟು ಮಾತ್ರ ನಾನು ಎಲ್ಲರಿಂದ ಬಯಸುವುದು. ಯಾರ ಬಗ್ಗೆಯೂ ದ್ವೇಷ ಹರಡಬಾರದು, ಮುಸ್ಲಿಮರು ಹಾಗೂ ಕಾಶ್ಮೀರದ ವಿಚಾರವಾಗಿ ಜನ ದ್ವೇಷ ಕಾರುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಾವು ಇದನ್ನು ಬಯಸುವುದಿಲ್ಲ, ನಾವು ಕೇವಲ ಶಾಂತಿಯನ್ನು ಬಯಸುತ್ತೇವೆ ಹಾಗೂ ಶಾಂತಿಯನ್ನು ಮಾತ್ರ ಬಯಸುತ್ತೇವೆ ಎಂದು ವಿಡಿಯೋದಲ್ಲಿ ಅವರು ಹೇಳಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟ್ರೋಲ್ ಮಾಡಲಾಗಿದೆ. ಇದು ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೂ ಬಂದಿದ್ದು, ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗ ಹಿಮಾಂಶಿ ನರ್ವಾಲ್ ಬೆಂಬಲಕ್ಕೆ ನಿಂತಿದೆ.
ಟ್ರೋಲ್ ಬೆಳವಣಿಗೆ ಅತ್ಯಂತ ಖಂಡನೀಯ ಹಾಗೂ ದುರಾದೃಷ್ಟಕರ. ಮಹಿಳೆಯೊಬ್ಬರು ಅವರ ಚಿಂತನೆ ಹೇಳಿಕೊಂಡಿದ್ದಕ್ಕಾಗಿ ವೈಯಕ್ತಿಕವಾಗಿ ಟ್ರೋಲ್ ಮಾಡುತ್ತಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಒಪ್ಪಿಗೆ ಅಥವಾ ವಿರೋಧ ಸಭ್ಯ ರೀತಿಯಲ್ಲಿಯೇ ವ್ಯಕ್ತಪಡಿಸಬೇಕು. ರಾಷ್ಟ್ರೀಯ ಮಹಿಳಾ ಆಯೋಗವೂ ಪ್ರತಿಯೊಬ್ಬ ಮಹಿಳೆಯ ಘನತೆ ಹಾಗೂ ಗೌರವದ ರಕ್ಷಣೆಗೆ ಬದ್ಧವಾಗಿದೆ ಎಂದು ಮಹಿಳಾ ಆಯೋಗ ಹೇಳಿದೆ.