ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ʻಆಪರೇಷನ್ ಸಿಂಧೂರʼ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸೇನೆ ನಡೆಸಿರುವ ಈ ದಾಳಿ ಭಾರತದ ಮೇಲೆ ಸತತವಾಗಿ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದ್ದ ಉಗ್ರಗಾಮಿಗಳಿಗೆ ಕಲಿಸಿದ ಪಾಠ ಮಾತ್ರವಲ್ಲ, ಈ ಉಗ್ರರಿಗೆ ಆಶ್ರಯ ಮತ್ತು ನೆರವು ನೀಡಿ ಭಾರತದ ವಿರುದ್ಧ ಅವರನ್ನು ಛೂಬಿಡುತ್ತಿದ್ದ ಪಾಕಿಸ್ಥಾನಕ್ಕೂ ನೀಡಿರುವ ಎಚ್ಚರಿಕೆ ಆಗಿದೆ ಎಂದು ಹೇಳಿದರು.