ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ವಿರುದ್ಧ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪತ್ರ ಬರೆದಿದ್ದಾರೆ.
ಕಳೆದ ಕೆಲವು ವಾರಗಳಿಂದ ಒತ್ತಡ ಹೆಚ್ಚಿದೆ. ಆದರೆ ಆ ಎಲ್ಲಾ ಒತ್ತಡ, ಸಂದರ್ಭಗಳನ್ನು ನಿಭಾಯಿಸಲು ನಿಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯಿಂದ ಸಾಧ್ಯವಾಗಿದೆ, ಉನ್ನತ ಜವಾಬ್ದಾರಿಯನ್ನು ಹೊಂದಿರುವಾಗ ಎಲ್ಲದರಿಂದ ದೂರವಿದ್ದು ಸಮಚಿತ್ತತೆ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ ಅದು ಅಧ್ಯಾತ್ಮದಿಂದಷ್ಟೇ ಸಾಧ್ಯ. ಕೆಲವು ದಿನಗಳಲ್ಲಿ ಆ ಶಕ್ತಿ ನಿಮ್ಮಲ್ಲಿ ಇದೆ ಎಂಬುದನ್ನು ನೀವು ತೋರಿಸಿದ್ದೀರಿ ಎಂದು ಶ್ಲಾಘಿಸಿದ್ದಾರೆ.
ಸೌದಿ ಅರೇಬಿಯಾ ಭೇಟಿಯಲ್ಲಿದ್ದ ನೀವು ಭಯೋತ್ಪಾದಕ ದಾಳಿ ವಿಷಯ ಗೊತ್ತಾಗುತ್ತದ್ದಂತೆಯೇ ಭೇಟಿಯನ್ನು ಮೊಟಕುಗೊಳಿಸಿ ಕೂಡಲೇ ಸ್ವದೇಶಕ್ಕೆ ವಾಪಸ್ ಬಂದೀರಿ. ತಕ್ಷಣದಿಂದಲೇ ದೇಶದಲ್ಲಿ ಸೃಷ್ಟಿಯಾಗಿದ್ದ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುವುದರ ಜೊತೆಗೆ, ವ್ಯೂಹಾತ್ಮಕ ಸಭೆಗಳನ್ನು ನಡೆಸಿ ಜಾಗತಿಕ ಬೆಂಬಲವನ್ನು ಸಜ್ಜುಗೊಳಿಸಲು ಮಹತ್ವದ ಪಾತ್ರ ವಹಿಸಿದಿರಿ.
ಸಶಸ್ತ್ರ ಪಡೆಗಳಿಗೆ ಸ್ಫೂರ್ತಿ ನೀಡಲು ತಾವು ಮೊದಲ ದಿನದಿಂದಲೇ ನೀವು ತೆಗೆದುಕೊಂಡ ದೃಢ ನಿರ್ಧಾರದ ಕ್ರಮಗಳನ್ನು ನಾನು ಗಮನಿಸುತ್ತಿದ್ದೇನೆ. ನಂತರ ನೀವು ಎಲ್ಲಾ ತುರ್ತು ಪರಿಸ್ಥಿತಿಗಳ ಮೇಲ್ವಿಚಾರಣೆ ನಡೆಸಲು ಯುರೋಪ್ ಪ್ರವಾಸವನ್ನು ರದ್ದುಗೊಳಿಸಿದ್ದೀರಿ ಎಂದು ಮಾಜಿ ಪ್ರಧಾನಿಗಳು ಮೋದಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವಾರಗಳಿಂದ ನೀವು ಬಹಳ ಒತ್ತಡ ಮತ್ತು ಸಂಯಮದಿಂದ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ದೇವರು ನಿಮಗೆ ದುಷ್ಟರನ್ನು ಹತ್ತಿಕ್ಕುವ ಸರ್ವಶಕ್ತಿಯನ್ನು ನೀಡಲಿ. ದೇಶ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿಯೂ ನಿಮಗೆ ಸಿಗಲಿ. ಕಠಿಣ ಸಂದರ್ಭದಲ್ಲಿ ದೇಶದ ನಾಯಕತ್ವ ವಹಿಸಿರುವ ನಿಮ್ಮ ಹೆಸರು ಇತಿಹಾಸದಲ್ಲಿ ಪ್ರಕಾಶಮಾನವಾಗಿ ದಾಖಲಾಗಲಿದೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.