ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಂಡಿದ್ದು,ಕೇವಲ ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲ, ಪಾಕಿಸ್ತಾನ ಜೊತೆ ಗಡಿ ಹಂಚಿಕೊಂಡಿರುವ ಗುಜರಾತ್, ರಾಜಸ್ಥಾನ, ಪಂಜಾಬ್ ರಾಜ್ಯದಲ್ಲೂ ಪರಿಸ್ಥಿತಿ ಗಂಭೀರವಾಗಿದೆ.ಗಡಿಯಲ್ಲಿ ಯುದ್ಧ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ಮದುವೆಯಲ್ಲಿ ಡ್ರೋನ್, ಕಾರ್ಯಕ್ರಮಗಲ್ಲಿ ಪಟಾಕಿ ಸಿಡಿಸುವುದು ನಿಷೇಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಜೊತೆಗೆ ರಾಜಸ್ಥಾನ, ಪಂಜಾಬ್ ಹಾಗೂ ಗುಜರಾತ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಹಾಗೂ ವಿನಾ ಕಾರಣ ಗೊಂದಲ ಸೃಷ್ಟಿಯಾಗುವುದನ್ನು ತಪ್ಪಿಸಲು ಗುಜರಾತ್ ಸರ್ಕಾರ ಡ್ರೋನ್ ಬಳಕೆ, ಪಟಾಕಿ ಬಳಕೆ ನಿಷೇಧಿಸಿದೆ. ಸದ್ಯ ಮೇ. 15ರ ವರೆಗೆ ಡ್ರೋನ್ ಹಾಗೂ ಪಟಾಕಿ ಬಳಕೆ ನಿಷೇಧಿಸಿ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಆದೇಶ ನೀಡಿದ್ದಾರೆ.
ಸದ್ಯ ಮದುವೆ ಸೀಸನ್ ಆಗಿದೆ. ಹೀಗಾಗಿ ಮದುವೆ ಸಮಾರಂಭವನ್ನು ಮತ್ತಷ್ಟು ಸ್ಮರಣೀಯಾಗಿಸಲು ಪ್ರಯತ್ನಿಸುತ್ತಾರೆ. ಈ ಪೈಕಿ ಪ್ರೀ ವೆಡ್ಡಿಂಗ್,ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಹೀಗೆ ಹಲವು ಮದುವೆ ಕಾರ್ಯಕ್ರಮಗಳ ಫೋಟೋ, ವಿಡಿಯೋ ಮಾಡಲಾಗುತ್ತದೆ. ಬಹುತೇಕರು ಡ್ರೋನ್ ಬಳಸಿ ವಿಡಿಯೋ ಶೂಟ್ ಮಾಡುತ್ತಾರೆ. ಆದರೆ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಜೊತೆಗೆ, ಪಾಕಿಸ್ತಾನ ಡ್ರೋನ್ ಮೂಲಕ ದಾಳಿ ಮಾಡುತ್ತಿರುವ ಕಾರಣ ಮದುವೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಡ್ರೋನ್ ಬಳಕೆಯಿಂದ ಭದ್ರತಾ ಸಮಸ್ಯೆ ಸೃಷ್ಟಿಯಾಗಲಿದೆ. ಎಲ್ಲೆಡೆ ರೇಡಾರ್ ಹದ್ದಿನ ಕಣ್ಣಟ್ಟಿದೆ. ಹೀಗಾಗಿ ಡ್ರೋನ್ ಹೆಚ್ಚಿನ ಆತಂಕ ಜೊತೆಗೆ ಸುರಕ್ಷತೆ ನೀಡಲು ಸವಾಲಾಗಲಿದೆ. ಹೀಗಾಗಿ ಮದುವೆ ಸೇರದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ಡ್ರೋನ್ ಬಳಕೆಯನ್ನು ನಿಷೇಧಿಸಲಾಗಿದೆ.
ಗುಜರಾತ್ ಗಡಿ ಪ್ರದೇಶದಲ್ಲಿ ಹೈ ಅಲರ್ಟ್
ಗುಜರಾತ್ ಗಡಿ ಪ್ರದೇಶಗಳಲ್ಲಿ ಭಾರಿ ಅಲರ್ಟ್ ನೀಡಲಾಗಿದೆ. ಪಾಕಿಸ್ತಾನ ಎಲ್ಲಾ ದಿಕ್ಕುಗಳಿಂದ ದಾಳಿಗೆ ಪ್ರಯತ್ನಿಸುತ್ತಿದೆ. ಗುಜರಾತ್ ಭೂ ಪ್ರದೇಶ ಹಾಗೂ ಜಲ ಪ್ರದೇಶಗಳನ್ನು ಪಾಕಿಸ್ತಾನ ಜೊತೆ ಹಂಚಿಕೊಂಡಿದೆ. ಕರಾಚಿ ಬಂದರು ಗುಜರಾತ್ ಸಮೀಪದಲ್ಲೇ ಇದೆ. ಪಾಕಿಸ್ತಾನ ತನ್ನ ಎಲ್ಲಾ ಶಕ್ತಿ ಬಳಸಿ ಭಾರತದ ಮೇಲೆ ದಾಳಿಗೆ ಮುಂದಾಗುತ್ತಿದೆ. ಆದರೆ ಭಾರತ ಈ ಎಲ್ಲಾ ದಾಳಿಗಳನ್ನು ಹೊಡೆದುರುಳಿಸಿದೆ.