ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ವಿರುದ್ಧದ ದಾಳಿಗೆ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಮುಕ್ತ ಅಧಿಕಾರ, ಸ್ವಾತಂತ್ರ್ಯ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಯಾವತ್ತೂ ದ್ವಂದ್ವ ನಿಲುವು ಮತ್ತು ಇಬ್ಬಗೆ ನೀತಿ ಅನುಸರಿಸುವಲ್ಲಿ ಎತ್ತಿದ ಕೈ ಎಂಬುದು ಗೊತ್ತಿರುವ ವಿಷಯ. ಅಲ್ಲದೇ, ಅಲ್ಲಿನ ಮಿಲಿಟರಿ ಪಡೆ ಚುನಾಯಿತ ಸರ್ಕಾರದ ಮಾತು ಕೇಳುವುದಿಲ್ಲ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.
ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತೀಯ ಸೇನೆಗೆ ನಮ್ಮ ಸರ್ಕಾರ ಮುಕ್ತ ಅವಕಾಶ ನೀಡಿದೆ. ಅದರಂತೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ, ಪ್ರತೀಕಾರದಲ್ಲಿ ತೊಡಗಿದೆ. ಬಹುದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದೆ. ಭಾರತೀಯ ಸೇನೆ ಮೊದಲ ದಿನವೇ ಪಾಕಿಸ್ತಾನದ 9ಕ್ಕಿಂತ ಹೆಚ್ಚು ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದೆ. ಈ ದಾಳಿಯಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರು ಮತ್ತು ಭಯೋತ್ಪಾದಕ ಕುಟುಂಬಗಳು ಬಲಿಯಾಗಿವೆ. ಸಾಕಷ್ಟು ಭಯೋತ್ಪಾದಕ ಅಡಗುತಾಣಗಳು ಛಿದ್ರವಾಗಿವೆ. ಪ್ರಮುಖ ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದರು.