ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಆರ್‌ಎಸ್ ಅಣೆಕಟ್ಟಿನಲ್ಲಿರುವ ಬೃಂದಾವನ ಉದ್ಯಾನದ ಸೌಂದರ್ಯವನ್ನು ಆನಂದಿಸಲು ನೆರೆದಿದ್ದ ಪ್ರವಾಸಿಗರು ಜೋರಾಗಿ ಕೇಳಿಬಂದ ಸೈರನ್‌ಗಳು, ಹೊಗೆ ಮತ್ತು ಸುತ್ತಲೂ ಕಂಡುಬಂದ ಅವ್ಯವಸ್ಥೆಯ ದೃಶ್ಯಗಳ ಕಂಡು ದಿಗ್ಭ್ರಮೆಗೊಂಡಿದ್ದಾರೆ. ಆನಂತರ ಅದು ಮಾಕ್ ಡ್ರಿಲ್ ಎಂದು ತಿಳಿದು ಉಸಿರುಬಿಟ್ಟಿದ್ದಾರೆ.
ಇದೇನು ಭಯೋತ್ಪಾದಕ ದಾಳಿಯೇ ಅಥವಾ ಸಿನಿಮಾದ ಚಿತ್ರೀಕರಣವೇ ಎಂಬುದನ್ನು ತಿಳಿಯಲು ಸಾಧ್ಯವಾಗದೆ ಹಲವರು ಆತಂಕಗೊಂಡಿದ್ದರು. ಕೆಲ ಕಾಲದ ನಂತರ ಇದು ಗೃಹ ಸಚಿವಾಲಯದ ನಿರ್ದೇಶನಗಳ ಪ್ರಕಾರ ಮಂಡ್ಯ ಜಿಲ್ಲಾಡಳಿತ ನಡೆಸಿದ ಅಣಕು ಪ್ರದರ್ಶನವೆಂದು ತಿಳಿದು ನಿಟ್ಟುಸಿರು ಬಿಟ್ಟರು.
ಜಿಲ್ಲಾಧಿಕಾರಿ ಕುಮಾರ ಅವರ ನೇತೃತ್ವದಲ್ಲಿ ಬೃಂದಾವನದ ಆವರಣದಲ್ಲಿ ಎರಡು ತಾಸುಗಳಿಗೂ ಹೆಚ್ಚು ಕಾಲ ಅಣಕು ಪ್ರದರ್ಶನ ನಡೆಯಿತು.
ಮೂರು ಹಂತಗಳಲ್ಲಿ ನಡೆದ ಈ ಅಣಕು ಪ್ರದರ್ಶನದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಇತರ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಮೊದಲನೇ ಹಂತದಲ್ಲಿ ಬೃಂದಾವನ ಉದ್ಯಾನದ ದೋಣಿ ವಿಹಾರ ಕೇಂದ್ರದಲ್ಲಿ ನಡೆಸಲಾಯಿತು. ನೀರಿನಲ್ಲಿ ಬಿದ್ದವರ ರಕ್ಷಣೆಗೆ ಧಾವಿಸುವ ಸನ್ನಿವೇಶವನ್ನು ಜಲಾಶಯದ ತಗ್ಗಿನಲ್ಲಿರುವ ಕೊಳದಲ್ಲಿ ಸೃಷ್ಟಿಸಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ದೋಣಿಯಲ್ಲಿ ಧಾವಿಸಿ ನೀರಿನಲ್ಲಿ ಮುಳುಗಿದ್ದವರನ್ನು ದಡಕ್ಕೆ ತಂದರು. ಅಸ್ವಸ್ಥರಾಗಿದ್ದವರಿಗೆ ವೈದ್ಯಕೀಯ ಸಿಬ್ಬಂದಿ ತಾತ್ಕಾಲಿಕ ಶಿಬಿರಗಳಲ್ಲಿ ತುರ್ತು ಚಿಕಿತ್ಸೆ ನೀಡಿದರು.