ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಆಪರೇಷನ್ ಸಿಂದೂರ್ ನಡುವೆ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು, ಅವರ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿವೆ.
ರಣವೀರ್ ಅಲಹಾಬಾದಿಯಾ ತಮ್ಮ ಪೋಸ್ಟ್‌ನಲ್ಲಿ ‘ಪ್ರೀತಿಯ ಪಾಕಿಸ್ತಾನಿ ಸಹೋದರ ಸಹೋದರಿಯರೇ, ಇದಕ್ಕಾಗಿ ನಾನು ಅನೇಕ ಭಾರತೀಯರಿಂದ ದ್ವೇಷವನ್ನು ಎದುರಿಸಬೇಕಾಗುತ್ತದೆ. ಆದರೆ ಇದನ್ನು ಹೇಳುವುದು ಬಹಳ ಮುಖ್ಯ. ಅನೇಕ ಭಾರತೀಯರಂತೆ ನನ್ನ ಹೃದಯದಲ್ಲಿ ನಿಮ್ಮ ಬಗ್ಗೆ ದ್ವೇಷವಿಲ್ಲ. ನಮ್ಮಲ್ಲಿ ಅನೇಕರು ಶಾಂತಿಯನ್ನು ಬಯಸುತ್ತಾರೆ. ನಾವು ನಿಮ್ಮನ್ನು ಭೇಟಿಯಾದಾಗ ನೀವು ಪ್ರೀತಿಯಿಂದ ಸ್ವಾಗತಿಸುತ್ತೀರಿ. ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ನಾನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇನೆ, ಅವರ ಬಗ್ಗೆ ಅಲ್ಲ. ನಾವು ದ್ವೇಷವನ್ನು ಹರಡುತ್ತಿದ್ದೇವೆ ಎಂದು ಭಾವಿಸಿದರೆ ಕ್ಷಮಿಸಿ. ಪಾಕಿಸ್ತಾನಿಯರನ್ನು ಭೇಟಿಯಾದ ಭಾರತೀಯರು ಇದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಭಾರತೀಯ ಮತ್ತು ಪಾಕಿಸ್ತಾನಿ ಮಾಧ್ಯಮಗಳು ಎರಡೂ ಸುಳ್ಳುಗಳನ್ನು ಹರಡುತ್ತಿವೆ. ನಮ್ಮ ಹೆಚ್ಚಿನ ಜನಸಂಖ್ಯೆಯು ಗಡಿ ಪ್ರದೇಶದ ಮುಗ್ಧರಿಗೆ ಶಾಂತಿಯನ್ನು ಬಯಸುತ್ತದೆ. ಆದರೆ ಭಾರತವು ಪಾಕಿಸ್ತಾನಿ ಸೇನೆ ಮತ್ತು ಐಎಸ್ಐನ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಕೊನೆಗಾಣಿಸಲು ಬಯಸುತ್ತದೆ ಎಂದು ಹೇಳಿದ್ದಾರೆ.
ರಣವೀರ್ ಅಲಹಾಬಾದಿಯಾ ಅವರ ಪೋಸ್ಟ್ ನೋಡಿದ ನಂತರ ನೆಟ್ಟಿಗರು ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದು, ಇದಾದ ಬಳಿಕ ಅವರು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.