February 1, 2026
Sunday, February 1, 2026
spot_img

ಕೇಂದ್ರ ಬಜೆಟ್ ವಿಕಸಿತ ಭಾರತ ಸಂಕಲ್ಪಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ: ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ

ಹೊಸದಿಗಂತ ವರದಿ ಚಿತ್ರದುರ್ಗ:

ಕೇಂದ್ರ ಸರ್ಕಾರದ ಬಜೆಟ್ ರಾಷ್ಟ್ರದ ಆರ್ಥಿಕ ಪ್ರಗತಿಯ ಸ್ಥಿರತೆ ಕಾಪಾಡಿಕೊಳ್ಳಲು ಒಂದು ಉತ್ತಮ ಹೆಜ್ಜೆ ಇಟ್ಟಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ವೀಕ್ಷಿಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಿರುವ ವಾರ್ಷಿಕ ಬಜೆಟ್ ವಿಕಸಿತ್ ಭಾರತ್ ಎಂಬ ಥೀಮ್ ಹೊಂದಿದೆ. ಸರ್ಕಾರ ಸುಧಾರಣಾ ಘೋಷಣಾ ರೂಪದಂತೆ ಮುಂದುವರಿಯುತ್ತಿದೆ. ಉದ್ಯೋಗ ಮತ್ತು ಬೆಳವಣಿಗೆ ಉತ್ತೇಜಿಸಲು ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. 2025ರಲ್ಲಿ 350ಕ್ಕೂ ಹೆಚ್ಚು ಸುಧಾರಣೆಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಕೇಂದ್ರ ಬಜೆಟ್ ಬಂಡವಾಳ ವೆಚ್ಚ ರೂ.12.20 ಲಕ್ಷ ಕೋಟಿ ಆಗಿದ್ದು, 2026-27ರ ಹಣಕಾಸಿನ ಕೊರತೆಯನ್ನು ಶೇ.4.3 ಎಂದು ಅಂದಾಜಿಸಲಾಗಿದೆ. 2027ರಲ್ಲಿ ತೆರಿಗೆ ಸಂಗ್ರಹ ರೂ. 28.70 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಕೆಲವು ವಸ್ತುಗಳಿಗೆ ತೆರಿಗೆ ವಿನಾಯಿತಿ ಮತ್ತು ಕಡಿತಗಳನ್ನು ಘೋಷಿಸಲಾಗಿದೆ. ಇದರಿಂದಾಗಿ ಹಲವು ವಸ್ತುಗಳ ಬೆಲೆ ಕಡಿಮೆಯಾಗುತ್ತದೆ. ಇತರ ಕೆಲವು ವಸ್ತುಗಳ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆದರೆ ತೆರಿಗೆ ಪಾವತಿ ವಿಧಾನದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಒಂದು ದೀರ್ಘಕಾಲದ ಯೋಜನೆ. ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದು ದೀರ್ಘಕಾಲದ ವಿಕಸಿತ ಭಾರತದ ಪರಿಕಲ್ಪನೆಯಾಗಿದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವರು ಮಂಡಿಸಿದ ಇಂದಿನ ಬಜೆಟ್‌ನಲ್ಲಿ ಆರ್ಥಿಕ ಶಿಸ್ತು ಕಾಪಾಡಲು ವಿಕಸಿತ ಭಾರತ ಸಂಕಲ್ಪಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದಿದ್ದಾರೆ.

ತಂತ್ರಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಿರುವುದರಿಂದ ರಾಷ್ಟ್ರದಲ್ಲಿ ವಿಜ್ಞಾನ ತಂತ್ರಜ್ಞಾನದ ಪ್ರಗತಿ ಆಗಲಿದೆ ವಿದೇಶಿ ಶಿಕ್ಷಣ ಪಡೆಯಲು ಇಚ್ಚಿಸುವ ಭಾರತೀಯರಿಗೆ ಅನುಕೂಲ ಮಾಡಿದೆ ಷೇರುದಾರರು ಪಡೆಯುವ ಡಿವಿಡೆಂಟ್ ಮೇಲಿನ ಆದಾಯಕ್ಕೆ ತೆರಿಗೆಯ ವಿನಾಯಿತಿ ನೀಡಿರುವುದರಿಂದ ಉದ್ಯಮ ಅಥವಾ ಇತರ ಬಂಡವಾಳ ಹೂಡಿಕೆಗೆ ಹೆಚ್ಚಿನ ಉತ್ತೇಜನವಾಗಲಿದೆ. ಸೆಣಬು, ಬ್ಯಾಟರಿ, ಬಯೋಗ್ಯಾಸ್, ಚರ್ಮ ಮುಂತಾದ ಸ್ಥಳೀಯ ಉತ್ಪಾದನಾ ವಸ್ತುಗಳ ಮೇಲೆ ವಿಧಿಸಿರುವ ತೆರಿಗೆ ಕಡಿತ ಮಾಡಿದೆ. ಇದರಿಂದ ಆಂತರಿಕ ಉತ್ಪಾದನೆಗೆ ಹೆಚ್ಚಿನ ಬೆಂಬಲ, ಸಹಕಾರ ಆಗಲಿದೆ.

ಬಜೆಟ್‌ನಲ್ಲಿ ಕೃಷಿ, ಸಾರಿಗೆ, ಶಿಕ್ಷಣ, ಇಂಧನ, ಆರೋಗ್ಯ, ಗ್ರಾಮೀಣಾಭಿವೃದ್ಧಿಗೆ ಪ್ರಾಮುಖ್ಯತೆ ನೀಡಿರುವುದರಿಂದ ವಿಕಸಿತ ಭಾರತದ ಕಲ್ಪನೆ ಅನುಷ್ಠಾನಕ್ಕೆ ಇದು ಅಡಿಪಾಯವಾಗಲಿದೆ ಎಂದಿದ್ದಾರೆ.

ಸೌರಶಕ್ತಿ ಮತ್ತು ಚರ್ಮದ ಉತ್ಪನ್ನಗಳ ಬೆಲೆಗಳು, ಬೀಡಿ ಮತ್ತು ಬ್ಯಾಟರಿಗಳ ಬೆಲೆಗಳು, ಸಿಎನ್‌ಜಿ ಮತ್ತು ಜೈವಿಕ ಅನಿಲದ ಬೆಲೆಗಳು, ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳ ಬೆಲೆಗಳು, ಶೂ ಮತ್ತು ಬಟ್ಟೆ ರಫ್ತು, 17 ಗಂಭೀರ ಕಾಯಿಲೆಗಳಿಗೆ ಔಷಧಗಳು, ಮೀನುಗಾರರಿಗೆ ರಫ್ತು ಅಗ್ಗವಾಗಿದೆ. ವಿಮಾನ ಸಲಕರಣೆಗಳ ಬೆಲೆಗಳು, ವಿದೇಶದಲ್ಲಿ ಅಧ್ಯಯನ ಮತ್ತು ವಿದೇಶ ಪ್ರಯಾಣದ ವೆಚ್ಚ ಕಡಿಮೆಯಾಗುತ್ತದೆ. ಶಿಕ್ಷಣ ಮತ್ತು ವೈದ್ಯಕೀಯ ಮೇಲಿನ ಟಿಸಿಎಸ್ ಶೇಕಡಾ 5 ರಿಂದ 2 ಕ್ಕೆ ಇಳಿಸಲಾಗಿದೆ. ಫಾರ್ವರ್ಡ್ ಟ್ರೇಡಿಂಗ್ ಖನಿಜಗಳು, ಸ್ಕ್ರ್ಯಾಪ್, ಮದ್ಯ, ಸಿಗರೇಟ್ ಬೆಲೆ ಹೆಚ್ಚಾಗಲಿವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಮಾಧುರಿ ಗಿರೀಶ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮುಖಂಡರಾದ ಸಿದ್ದಾರ್ಥ ಗುಂಡಾರ್ಪಿ, ಮೋಹನ್ ಕುಮಾರ್, ವಕ್ತಾರ ನಾಗರಾಜ್ ಬೇದ್ರೆ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ರೇಖಾ, ನಗರ ಯುವ ಘಟಕದ ಅಧ್ಯಕ್ಷ ವಸಂತಚಾರ್, ಗ್ರಾಮಾಂತರ ಯುವ ಘಟಕದ ಅಧ್ಯಕ್ಷ ಸಿದ್ದೇಶ್ ಯಾದವ್, ಮಹಿಳಾ ಯುವ ಮೋರ್ಚಾದ ಅಧ್ಯಕ್ಷ ಕವಿತಾ ಜವಳಿ, ಬಸಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !