ಹೊಸದಿಗಂತ ವರದಿ ವಿಜಯಪುರ:
ಭಾರತದ ಹಿತ, ರಕ್ಷಣೆ ಮಾಡೋದು ನಮ್ಮೆಲ್ಲರ ಆದ್ಯ ಕರ್ತವ್ಯ. ಕೇಂದ್ರ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ, ಸರ್ವ ಪಕ್ಷದ ಸಭೆಯಲ್ಲಿ ಏನು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಅದಕ್ಕೆ ಬದ್ಧರಾಗಬೇಕು ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿ, ನಮ್ಮ ಸೈನಿಕರಿಗೆ ನೈತಿಕ ಧೈರ್ಯ, ಸೈನಿಕರಿಗೆ ರಕ್ಷಣೆಯ ಪ್ರಾರ್ಥನೆ ಮಾಡುವ ಕೆಲಸ ದೇಶದ ಪ್ರತಿ ನಾಗರಿಕರು ಮಾಡುತ್ತಿದ್ದಾರೆ. ನಮ್ಮ ದೇಶ ಒಗ್ಗಟ್ಟಿನ ಸಂದೇಶ ಕೊಡುತ್ತಿದೆ ಎಂದರು.
ಯಾರು ನಮ್ಮ ದೇಶಕ್ಕೆ ಬಂದು ಭಯೋತ್ಪಾದನೆ ಮಾಡುತ್ತ, ತೊಂದರೆ ನೀಡಿ, ಧರ್ಮಾಧಾರಿತ ಸಮಸ್ಯೆ ಉಂಟು ಮಾಡಿ, ಜನರ ಮಧ್ಯೆ ಗಲಾಟೆ ಆಗಬೇಕೇಂಬ ಉದ್ದೇಶದಿಂದಲೇ ಭಯೋತ್ಪಾದನೆ ಮಾಡುವಂತಹದ್ದು. ಭಯೋತ್ಪಾದಕರ ಉದ್ದೇಶ ಈಡೇರಿಸಲು ನಾವ್ಯಾರೂ ಕೂಡ ನಮ್ಮ ದೇಶದಲ್ಲಿ ಅವಕಾಶ ಮಾಡಬಾರದು. ನಾವಾಡುವ ಪ್ರತಿ ಮಾತು, ಪ್ರತಿ ಕೆಲಸ ದೇಶ ಕಟ್ಟುವ ಕೆಲಸ ಆಗಬೇಕೇ ಹೊರತು ದೇಶವನ್ನು ಬಿಗಡಾಯಿಸುವ ಕೆಲಸ ಯಾರಿಂದಲೂ ಆಗಬಾರದು ಎಂದರು.
ನಿಜವಾದ ದೇಶ ಪ್ರೇಮ ಯಾವುದು ಅಂದರೆ ಸಮಾಜಕ್ಕೆ, ಸಮಾಜದ ಹಿತಾಸಕ್ತಿಗೆ, ದೇಶ ಒಗ್ಗೂಡಿಸುವ ಮಾತುಗಳೇ ದೇಶ ಪ್ರೇಮ ಎಂದರು.